- ಬೆಳಗಾವಿಯಲ್ಲಿ BSF ಯೋಧ ಆತ್ಮಹತ್ಯೆ ..!
ನೇಣಿಗೆ ಶರಣಾದ ಶೇಡಬಾಳ ಪಟ್ಟಣದ ಹವಾಲ್ದಾರ್ ಪೂಜಾರಿ..!
ನಿಗೂಢವಾಗಿ ಉಳಿದ ಆತ್ಮಹತ್ಯೆ ಕಾರಣ..?
ಬೆಳಗಾವಿ : ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದ 45 ವರ್ಷದ BSF ಹವಾಲ್ದಾರ ಯೋಧ ದಗಡು ಮಹಾದೇವ ಪೂಜಾರಿ ಇಂದು ಬೆಳಗಾವಿಯ ವಿಜಯ ನಗರದ 4 ನೇ ಕ್ರಾಸ್ ನಲ್ಲಿ ವಾಸವಾಗಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹವಾಲ್ದಾರ ದಗಡು ಪೂಜಾರಿ ಮೂಲತಃ ಶೇಡಬಾಳ ಸ್ಟೇಷನ್ ಗ್ರಾಮದವರಾಗಿದ್ದು, ಪ್ರಸ್ತುತ ಅಸ್ಸಾಂ ರಾಜ್ಯದ ಗೋವಾಟಿಯಲ್ಲಿ 170 ಬಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಕ್ಕಳ ಶಿಕ್ಷಣಕ್ಕಾಗಿ ಬೆಳಗಾವಿಯ ವಿಜಯ ನಗರದಲ್ಲಿ ವಾಸವಾಗಿದ್ದರು. ರಜೆಯ ಮೇಲೆ ಬಂದಿದ್ದ ಇವರು ಆರೋಗ್ಯ ಸಮಸ್ಯೆಯಿಂದ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.
ಯೋಧ ನಿನ್ನೆ ರಾತ್ರಿ ವಿಜನಗರದ ತಮ್ಮ ನಿವಾಸದ ರೂಮಿನೊಳಗೆ ಹೋದವರು ಊಟಕ್ಕೂ ಬಾರದೆ ಮಲಗಿದ್ದರು. ಬೆಳಗ್ಗೆ ಅವರ ಪತ್ನಿ ಹಾಗೂ ಮಕ್ಕಳು ಎಷ್ಟೇ ಕರೆದರೂ ಪ್ರತಿಕ್ರಿಯಿಸದಾಗ ಬಾಗಿಲು ತೆಗೆದು ನೋಡಿದಾಗ ಕೊಣೆಯ ಪ್ಯಾನಿಗೆ ನೇಣು ಹಾಕಿಕೊಂಡಿದ್ದರು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕ್ಯಾಂಪ್ ಪಿಐ ದಿಲೀಪ ನಿಂಬಾಳ್ಕರ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ತನಿಖೆ ಕೈಕೊಂಡು ಶವಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಿದರು.
ಮೃತ ಯೋಧರ ಪಾರ್ಥಿವ ಶರೀರ ಬುಧವಾರ ಸಂಜೆ ಸ್ವ ಗ್ರಾಮದ ಅವರ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳು, ಗ್ರಾಮದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಮೃತ ಯೋಧರಿಗೆ ವೃದ್ಧ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ.