ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇನ್ಮುಂದೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಲು ಸರಕಾರ ತೀರ್ಮಾನಿಸಿದ್ದು, ಬುಧವಾರ ನಡೆಯಲಿರುವ ಕ್ಯಾಬಿನೆಟ್ನಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.
ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿಸಲಾಗುತ್ತದೆ. ಈ ಪ್ರಸ್ತಾವನೆ ಇದೀಗ ಸಚಿವ ಸಂಪುಟದ ಮುಂದಿದ್ದು, ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಈಗಾಗಲೇ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಮಾಗಡಿ, ಚನ್ನಪಟ್ಟಣ, ರಾಮನಗರ ಮತ್ತು ಕನಕ ಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡಲಾಗಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸಲು ಸರಕಾರ ಮುಂದಾಗಿದೆ.