ದೆಹಲಿ : ರೊಟ್ಟಿ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ? ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ರೊಟ್ಟಿ ಎಂದರೆ ಪಂಚಪ್ರಾಣ. ಈ ಬಗ್ಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರೇ ಹಾಡಿ ಹೊಗಳಿದ್ದಾರೆ.
ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯವಾದ ‘ಬಿಳಿಜೋಳದ ರೊಟ್ಟಿ’ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಕಲಬುರಗಿ ರೊಟ್ಟಿಯನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ ಮಹಿಳೆಯರ ಪರಿಶ್ರಮವನ್ನು ಪ್ರಶಂಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ಮನ್ ಕಿ ಬಾತ್ 123ನೇ ಸರಣಿಯಲ್ಲಿ ಮಾತನಾಡಿ, ‘ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದ್ದು, ಮಹಿಳೆ ನಮ್ಮ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಈ ನಿಟ್ಟಿನಲ್ಲಿ ನೀವು ಕಲಬುರಗಿ ಮಹಿಳೆಯರ ಸಾಧನೆಯನ್ನು ತಿಳಿಯಲೇಬೇಕು. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರಾಂಡ್ ಆಗಿ ರೂಪಿಸಿದ್ದಾರೆ. ಇವರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆಯಲಾಗಿದೆ. ಆನ್ಲೈನ್ ಮೂಲಕ ಆರ್ಡರ್ ಬರುತ್ತಿವೆ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮವಿಶ್ವಾಸ, ಆತ್ಮನಿರ್ಭರದ ಪ್ರತೀಕವಾಗಿದೆ’ ಎಂದು ಶ್ಲಾಘಿಸಿದ್ದಾರೆ.