ನಿಪ್ಪಾಣಿ :
ಅಂತರಂಗದಲ್ಲಿರುವ ಶಕ್ತಿ, ಏನು, ಎಷ್ಟು ಅರಿಯಬೇಕಾದಲ್ಲಿ ನಮ್ಮನ್ನು ನಾವೇ ಪ್ರಯೋಗದಲ್ಲಿ ತೊಡಗಿಸಿಕೊಳ್ಳಬೇಕು. ದೊರಕಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕೌಶಲ್ಯಗಳನ್ನು ಬೆಳಸಿಕೊಂಡು ಸಾಧನೆಯ ಮೆಟ್ಟಿಲೇರಲು ಸನ್ನದ್ಧರಾಗಬೇಕು ಎಂದು ಬೆಳಗಾವಿಯ ಬಿ. ಕೆ. ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಡಿ.ಎನ್.ಮಿಸಾಳೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಕ್ರೀಡಾ ಮತ್ತು ವಿವಿಧ ಸಂಘಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸತತ ಮೂರು ಸಲ ‘ಎ’ ಗ್ರೇಡ್ ಶ್ರೇಣಿಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿ ಭವಿಷ್ಯತ್ತಿನಲ್ಲಿ ಸರ್ವೋತ್ತಮ ಅಭಿವೃದ್ಧಿ ಹೊಂದುವ ದಾರಿಗಳನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಪಠ್ಯದ ಜೊತೆ ಕ್ರೀಡೆ, ಸಾಂಸ್ಕೃತಿಕ ಮತ್ತು ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಪಾಲ್ಗೊಂಡು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಎಂ.ಹುರಳಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ನಮ್ಮ ಸಕಲ ಸಿಬ್ಬಂದಿ ಸದಾ ಸಿದ್ಧವಿದೆ. ಅದನ್ನು ಸರಿಯಾಗಿ ಸದ್ವಿನಿಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಕರೊನಾ ಹೆಚ್ಚಳದ ಆತಂಕದ ಹಿನ್ನೆಲೆಯಲ್ಲಿ ಸರಕಾರದ ಮಾಸ್ಕ್ ಕಡ್ಡಾಯಗೊಳಿಸಿ ಹೊರಡಿಸಿದ ಆದೇಶಕ್ಕೆ ಪೂರಕವಾಗಿ ನೆರೆದ ವಿದ್ಯಾರ್ಥಿಗಳೆಲ್ಲರಿಗೂ ಸೇರಿದಂತೆ ಸಭಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರವೀಣ ಬಾಗೇವಾಡಿ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಡಾ. ಆರ್.ಜಿ.ಖರಾಬೆ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ. ವಿಜಯ ಧಾರವಾಡ, ಐಕ್ಯೂಎಸಿ ಸಂಯೋಜಕ ಅತುಲಕುಮಾರ ಕಾಂಬಳೆ ಮತ್ತು ದೈಹಿಕ ನಿರ್ದೇಶಕ ಶಶಿಧರ ಕುಂಬಾರ ಉಪಸ್ಥಿತರಿದ್ದರು.
ಅಮಾನುಲ್ಲಾ ನದಾಫ ಮತ್ತು ಉದ್ಧವ ಸಾಳುಂಕೆ ಪ್ರಾರ್ಥಿಸಿದರು. ಪ್ರೊ. ವಿಜಯ ಧಾರವಾಡ ಸ್ವಾಗತಿಸಿದರು. ಡಾ. ಆರ್.ಜಿ.ಖರಾಬೆ ಪರಿಚಯಿಸಿದರು. ಆರ್.ಮೋನಿಕಾ ಮತ್ತು ನಮಿತಾ ನಾಯಿಕ ನಿರೂಪಿಸಿದರು. ಡಾ. ಅತುಲಕುಮಾರ ಕಾಂಬಳೆ ವಂದಿಸಿದರು.