ನವದೆಹಲಿ: ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು ಮತ್ತು ಬಹುಶಕ್ತಿಗಳು ಒಟ್ಟಾಗಿ ಬಂದರೂ ವಶಪಡಿಸಿಕೊಳ್ಳಲು ಸಾಧ್ಯವಾಗದಷ್ಟು ಭಾರತದ ಸೇನೆ ಮತ್ತು ಆರ್ಥಿಕತೆಯನ್ನು ಶಕ್ತಿಯುತವಾಗಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕರೆ ನೀಡಿದ್ದಾರೆ.
ಭಾರತವು ತನ್ನ ಎಲ್ಲ ಗಡಿಗಳಲ್ಲಿ ದುಷ್ಟರ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವುದರಿಂದ ನಾವು ಶಕ್ತಿಯುತರಾಗುವುದು ಅನಿವಾರ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಭಾಗವತ್ ಅವರು ತಿಳಿಸಿದ್ದಾರೆ. ಈ ಸಂದರ್ಶನವು ‘ಆರ್ಗನೈಸರ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
‘ಭಾರತವು ರಾಷ್ಟ್ರೀಯ ಭದ್ರತೆಗಾಗಿ ಬೇರೆಯವರನ್ನು ಅವಲಂಬಿಸುವಂತಾಗಬಾರದು. ಕೇವಲ ಸದ್ಗುಣಗಳಿಂದ ವ್ಯಕ್ತಿಯು ಸುರಕ್ಷಿತನಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸದ್ಗುಣಗಳನ್ನು ಶಕ್ತಿಯೊಂದಿಗೆ ಸಂಯೋಜಿಸಬೇಕು. ವಿವೇಚನಾರಹಿತ ಬಲಪ್ರಯೋಗವು ಘೋರ ಹಿಂಸೆಗೆ ಕಾರಣವಾಗುತ್ತದೆ. ಬಲಪ್ರಯೋಗ ಮಾಡುವುದಿದ್ದರೆ ಅದಕ್ಕೆ ಸದುದ್ದೇಶ ಇರಬೇಕು’ ಎಂದು ಭಾಗವತ್ ಹೇಳಿದ್ದಾರೆ.
ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಕಾಳಜಿ ತೋರಿದ್ದಾರೆ ಎಂದು ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಭಾಗವತ್ ಅವರು, ‘ಹಿಂದೂಗಳು ಬಲಿಷ್ಠರಾದಾಗ ಮಾತ್ರ ಯಾರಾದರೂ ನಮ್ಮ ಬಗ್ಗೆ ಯೋಚಿಸುತ್ತಾರೆ’ ಎಂದು ಹೇಳಿದರು.
‘ಕೃಷಿ, ಕೈಗಾರಿಕೆ ಮತ್ತು ವೈಜ್ಞಾನಿಕ ಕ್ರಾಂತಿ ಮುಗಿದಿದೆ. ಜಗತ್ತಿನಲ್ಲಿ ಈಗ ಧಾರ್ಮಿಕ ಕ್ರಾಂತಿಯ ಅವಶ್ಯಕತೆಯಿದೆ. ನಾನು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಮಾನವ ಜೀವನವು ಸತ್ಯ, ಶುದ್ಧತೆ, ಸಹಾನುಭೂತಿ ಮತ್ತು ಧ್ಯಾನದ ಆಧಾರದಲ್ಲಿ ಮರುಸಂಘಟಿತವಾಗಬೇಕು. ಜಗತ್ತಿಗೆ ಇದು ಅಗತ್ಯವಾಗಿದ್ದು, ಭಾರತ ಅನಿವಾರ್ಯವಾಗಿ ಈ ಮಾರ್ಗವನ್ನು ತೋರಿಸಬೇಕು’ ಎಂದು ಹೇಳಿದ್ದಾರೆ.