ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರಕಾರ 2 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಪ್ರಗತಿಯತ್ತ ಕರ್ನಾಟಕ ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಇದೇ ವೇಳೆ 3 ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರವೂ ಪ್ರಗತಿಯತ್ತ ಮತ್ತೊಂದು ದಾಪುಗಾಲು ಇಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಂಚಾಯಿತಿ ವ್ಯಪ್ತಿಯಲ್ಲಿ ಸಂಭ್ರಮ ಮನೆಮಾಡಿದೆ.
ಇದಕ್ಕೆ ಕಾರಣೀಕರ್ತರಾದ ಕ್ಷೇತ್ರದ ಶಾಸಕರೂ ಆಗಿರುವ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಮೂರೂ ಪಂಚಾಯಿತಿಗಳ ಪ್ರತಿನಿಧಿಗಳು ಸನ್ಮಾನಿಸುವ ಮೂಲಕ, ಕೃತಜ್ಞತೆ ಸಲ್ಲಿಸಿದರು.
ಹಿರೇಬಾಗೇವಾಡಿ, ಬೆನಕನಹಳ್ಳಿ ಹಾಗೂ ಹಿಂಡಲಗಾ ಗ್ರಾಮಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಈಚೆಗೆ ನಡೆದ ಸಚಿವಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮೂರೂ ಪಂಚಾಯಿತಿಗಳ ಬಹುದಿನಗಳ ಬೇಡಿಕೆಯ ಮೇರೇಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತ ಪ್ರಸ್ತಾವನೆಯನ್ನು ಸಚಿವಸಂಪುಟದ ಮುಂದಿಟ್ಟಿದ್ದರು. ಸತತ ಪ್ರಯತ್ನದ ಮೂಲಕ ಅನುಮೋದನೆ ಪಡೆಯುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ.
ಈ ಬೆಳವಣಿಗೆಯಿಂದಾಗಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಮತ್ತು ಮೂರೂ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಶರವೇಗ ಸಿಕ್ಕಿದಂತಾಗಿದೆ. ಇಲ್ಲಿನ ಭೂಮಿಯ ಬೆಲೆ ಹೆಚ್ಚಾಗಲಿದೆ, ಉತ್ತಮ ಮೂಲಭೂತ ಸೌಲಭ್ಯಗಳು ಸಿಗಲಿವೆ. ಉದ್ಯೋಗಾವಕಾಶಗಳು ಹೆಚ್ಚಾಗಲಿವೆ, ಕೇಂದ್ರ, ರಾಜ್ಯ ಸರಕಾರಗಳ ಅನುದಾನ ಪಡೆಯಲು ಅವಕಾಶವಾಗುತ್ತದೆ, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿವೆ. ಈ ಹಿನ್ನೆಲೆಯಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ.
ಶನಿವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಗೆ ಆಗಮಿಸಿದ ಹಿರೇಬಾಗೇವಾಡಿ, ಹಿಂಡಲಗಾ ಮತ್ತು ಬೆನಕನಹಳ್ಳಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಗಳ ಪ್ರಮುಖರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ಎಂದರೆ ಏನೆಂದೇ ಅರಿಯದ ನಮಗೆ ಕಳೆದ 7 ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಸರಕಾರವೇ ನಮ್ಮ ಮನೆಬಾಗಿಲಿಗೆ ಬಂದ ರೀತಿ ಅನಿಸುತ್ತಿದೆ. ನೀವು ಇದೇ ರೀತಿ ಮುಂದುವರಿಯಿರಿ, ಸದಾ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು, ಈ ವೇಳೆ ಮಾತನಾಡಿದ ಪ್ರಮುಖರು ಭರವಸೆ ನೀಡಿದರು.
ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾನು ಹೆಜ್ಜೆ ಇಟ್ಟಿದ್ದೇನೆ. ಒಂದೊಂದಾಗಿ ಎಲ್ಲವೂ ಈಡೇರಲಿವೆ. ಇದಕ್ಕೆ ಜನರ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಹಲವಾರು ಪ್ರಮುಖ ಯೋಜನೆಗಳು ಕಾರ್ಯಗತವಾಗಲಿವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
ನಾನು ಶಾಸಕಿಯಾಗುವ ಮುನ್ನ, 7 ವರ್ಷದ ಹಿಂದೆ ಈ ಕ್ಷೇತ್ರ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ. ಪ್ರತಿ ಊರಲ್ಲಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಸರ್ವರೀತಿಯ ಮೂಲಭೂತ ಸೌಲಭ್ಯಗಳಅಭಿವೃದ್ಧಿ ಮಾಡಲಾಗಿದೆ. ಜಾತಿ, ಧರ್ಮ, ಪಕ್ಷ ಯಾವುದೇ ಭೇದವಿಲ್ಲದೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಪಕ್ಷಾತೀತವಾಗಿ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಕ್ಷೇತ್ರದ ಶೈಕ್ಷಣಿಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನಿರಂತರ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪಾಲಕರು, ಶಿಕ್ಷಕರು ಮುತುವರ್ಜಿ ವಹಿಸಬೇಕು. ಸುಮಾರು 43.44 ಲಕ್ಷ ರೂ.ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣವಾಗಲಿವೆ. ಸಕಾಲದಲ್ಲಿ, ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ಯುವರಾಜ ಕದಂ, ಗುರುನಾಥ್ ಪಾಟೀಲ, ವನಿತಾ ಪಾಟೀಲ, ಚಿತ್ರಾ ಕಿತ್ತೂರಕರ್, ಮನೋಹರ್ ಬೆಳಗಾಂವ್ಕರ್, ಶಿವಾಜಿ ಬೋಕಡೆ, ಶಿವಾಜಿ ಜಾಂಗ್ರೂಚೆ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ರಸ್ತೆ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಮುಖ್ಯ ರಸ್ತೆಯಿಂದ ತರುಣ ಭಾರತ ಪ್ರೆಸ್ ವರೆಗಿನ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಹಿತ್ತಲಮನಿ, ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಗಜಾನನ ಬಾಂಡೇಕರ್, ಅಶೋಕ ಕಾಂಬಳೆ, ಮಿಥುನ್ ಉಸುಳಕರ್, ವಿಜಯ ಪಾಟೀಲ, ಪ್ರೇರಣಾ ಮಿರಜಕರ್, ನಾಮದೇವ್ ಪಾಟೀಲ, ರಾಮಚಂದ್ರ ಕುದ್ರೆಮನಿಕರ್, ಗಿರಿಧರ್ ಬೆಳಗುಂದ್ಕರ್, ಹೇಮಾ, ತರುಣ ಭಾರತ ಸಿಬ್ಬಂದಿ ಉಪಸ್ಥಿತರಿದ್ದರು.
4.90 ಕೋಟಿ ರೂ. ವೆಚ್ಚದಲ್ಲಿ ಸಹ್ಯಾದ್ರಿ ನಗರ ಜಂಕ್ಷನ್ ಗಳ ಅಭಿವೃದ್ಧಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಹ್ಯಾದ್ರಿ ನಗರದ ಜಂಕ್ಷನ್ ಗಳ ಹಾಗೂ ಸಂಪರ್ಕ ರಸ್ತೆಗಳ ಸುಧಾರಣೆಯ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 4.90 ಕೋಟಿ ರೂ. ವೆಚ್ಚದಲ್ಲಿ ಜಂಕ್ಷನ್ ಗಳ ಹಾಗೂ ಸಂಪರ್ಕ ರಸ್ತೆಗಳ ಕಾಮಗಾರಿ ನಡೆಯಲಿದೆ. ಮಹಾಬಳೇಶ್ವರ ದೇವಸ್ಥಾನ ಹಾಗೂ ಮಹಾಲಕ್ಷ್ಮೀ ದೇವಸ್ಥಾನ ಹತ್ತಿರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವಿಶೇಷ ಪ್ರಯತ್ನದಿಂದ ಸಚಿವರು ಅನುದಾನ ಮಂಜೂರು ಮಾಡಿಸಿದ್ದು, ವಿಶಾಲವಾಗಿರುವ ಸಹ್ಯಾದ್ರಿ ನಗರದ ಸೌಂದರ್ಯೀಕರಣ ಮತ್ತು ಅಭಿವೃದ್ಧಿಗೆ ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತೊಡಕಲಕಟ್ಟಿ, ಮುಸ್ತಾಕ್ ಮುಲ್ಲಾ, ವನಿತಾ ಗೊಂದಳಿ, ಸಂಗೀತಾ, ಪಿಕೆ ಪಾಟೀಲ, ಹಿರೇಮಠ್, ಸುರೇಶ ಜಡಗಿ, ಬಸವರಾಜ ಡೂಗನವರ್, ಸಂಜೀವ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.