ಬೆಳಗಾವಿ: ಬೆಳಗಾವಿ ನಗರದ ಮಾದರಿಯಲ್ಲಿ ಸಂತಿ ಬಸ್ತವಾಡ ಗ್ರಾಮ ಅಭಿವೃದ್ಧಿಯಾಗುತ್ತಿದೆ. ನಾನು ಶಾಸಕಿಯಾದ ಬಳಿಕ ಈ ಗ್ರಾಮ ಸಮಗ್ರ ಅಭಿವೃದ್ಧಿ ಕಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಂತಿ ಬಸ್ತವಾಡ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ, ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಸಂತಿ ಬಸ್ತವಾಡ ಮೊದಲು ಹೇಗಿತ್ತು, ಈಗ ಹೇಗಾಗಿದೆ ನೀವೆ ನೋಡಿ, ದೇವಸ್ಥಾನಗಳು ಚರ್ಚ್, ಮಸೀದಿಗಳ ಅಭಿವೃದ್ಧಿಗೆ ಹಣ ನೀಡಿರುವೆ ಎಂದರು.
ವಿಶೇಷ ಕಾಳಜಿಯಿಂದ ಸುಮಾರು 33 ಲಕ್ಷ ರೂಪಾಯಿ ವೆಚ್ಚದಲ್ಲಿ, ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಗ್ರಾಮಸ್ಥರ ಹಾಗೂ ಆ ದೇವರ ಆಶೀರ್ವಾದದಿಂದ ಇವತ್ತು ಕರ್ನಾಟಕದ ಏಳೂವರೆ ಕೋಟಿ ಜನಸಂಖ್ಯೆಯಲ್ಲಿ ಒಬ್ಬಳೇ ನಾನು ಮಹಿಳಾ ಮಂತ್ರಿಯಾಗಿರುವೆ. ನನ್ನ ಇಲಾಖೆಯ ವ್ಯಾಪ್ತಿಗೆ ಬರುವ ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 30 ಸಾವಿರ ಕೋಟಿ ರೂ ನೀಡಲಾಗುತ್ತಿದೆ. ಇಂಥ ಬಹುದೊಡ್ಡ ಜವಾಬ್ದಾರಿ ಸಿಗಲು ನಿಮ್ಮೆಲ್ಲರ ಆಶೀರ್ವಾದವೇ ಕಾರಣ ಎಂದರು.
* *ಪುನರ್ಜನ್ಮ ಪಡೆದಿರುವೆ
ಕಳೆದ ಜನವರಿ ತಿಂಗಳಲ್ಲಿ ದೊಡ್ಡ ಅಪಘಾತದಿಂದ ಪಾರಾಗಿ ಬಂದಿರುವೆ. ಆ ಪರಿಸ್ಥಿತಿ, ಆ ಗಾಡಿ ಪರಿಸ್ಥಿತಿ ನೋಡಿದರೆ ನಾನು ವಾಪಸ್ ಬಂದಿದ್ದೆ ಹೆಚ್ಚು, ಇದಕ್ಕೆ ದೇವರ ಆಶೀರ್ವಾದವೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಬಡೇಕೊಳ್ಳಮಠದ ಶ್ರೀ ನಾಗಯ್ಯ ಅಜ್ಜನವರು, ಯುವರಾಜ ಕದಂ, ಎಸಿಪಿ ಗಂಗಾಧರ್ ಮಠಪತಿ, ಆಶ್ಪಾಕ್ ತಹಶಿಲ್ದಾರ, ಶಿವಾಜಿ ಬಸ್ತವಾಡಕರ್, ಮೃಣಾಲ್ ಹೆಬ್ಬಾಳಕರ್, ದ್ಯಾಮಣ್ಣ ನಾಯಿಕ್, ಜ್ಯೋತಿಬಾ ದೆರವಶಿ, ನಾಗೇಂದ್ರ ಬುಡರಿ, ಅಜಯ ಚಿನಕುಪ್ಪಿ, ಚನ್ನವೀರ ಪೂಜೇರಿ, ಬಾಬಾಜಿ ಪಾವಸೆ, ಬಸು ಬಿರಮೂತಿ, ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.