ಬೆಳಗಾವಿ : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ KMMCR-1994ರ ನಿಯಮಗಳಲ್ಲಿ ತಿದ್ದುಪಡಿ ಕುರಿತ ಕ್ವಾರಿ ಮಾಲೀಕರ ಬೇಡಿಕೆ ಶೀಘ್ರ ಈಡೇರಿಸಲು ಪ್ರಯತ್ನಿಸುವ ಭರವಸೆಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೀಡಿದ್ದಾರೆ.
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಈ ಕುರಿತು ಸೋಮವಾರ ಮನವಿ ಸ್ವೀಕರಿಸಿದ ಅವರು, ವಿಧಾನ ಪರಿಷತ್ ನಲ್ಲಿ ಈ ಕುರಿತು ಪ್ರಸ್ತಾಪಿಸಿ ತಿದ್ದುಪಡಿ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
KMMCR-1994ರ ನಿಯಮಗಳಡಿ ಈ ಹಿಂದೆ ತಮಗೆ ವಿಧಿಸಿದ್ದ 5 ಪಟ್ಟು ದಂಡ ವಿಲೇವಾರಿ ಮಾಡಿ ಹೆಕ್ಟೇರ್ ಗೆ 5 ಲಕ್ಷ ದಂಡ ವಿಧಿಸಿ ಇತ್ಯರ್ಥಪಡಿಸಬೇಕು, ಪಟ್ಟಾ ಸ್ಥಳಗಳಲ್ಲಿ ಗುತ್ತಿಗೆ ಪಡೆಯಲು ರಾಜಧನ ಮತ್ತು ಶುಲ್ಕಗಳಲ್ಲಿ ರಿಯಾಯಿತಿ ಕಲ್ಪಿಸಬೇಕು. ಗಣಿ ಗುತ್ತಿಗೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳಿಗೆ ಮಂಜೂರಾತಿ ನೀಡಬೇಕು. ನಿಯಮ 6(2) ರಲ್ಲಿ 100 ಮೀಟರ್ ಗೆ ಮಿತಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದಲ್ಲದೆ, ಈಗಾಗಲೇ ಕ್ರಷರ್ ಘಟಕ ಹೊಂದಿರುವವರಿಗೆ ಟೆಂಡರ್ ರಹಿತವಾಗಿ ಗಣಿ ಗುತ್ತಿಗೆ ಮಂಜೂರಾತಿ ಪಡೆಯಲು 3 ತಿಂಗಳ ಕಾಲಾವಕಾಶ ನೀಡಬೇಕು. ಈಗಾಗಲೇ ಗಣಿ ಗುತ್ತಿಗೆ ನೀಡಿರುವ ಪ್ರದೇಶಗಳ ಸುತ್ತ ಜಾಗದ ಲಭ್ಯತೆಯಿದ್ದಲ್ಲಿ 25 ಮೀಟರ್ ಗಳವರೆಗೆ ಗಣಿ ಗುತ್ತಿಗೆ ಮಂಜೂರಾತಿಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಸೋಸಿಯೇಶನ್ ಗೌರವಾಧ್ಯಕ್ಷ ಡಿ.ಸಿದ್ಧರಾಜು, ಅಧ್ಯಕ್ಷ ರವೀಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಕಿರಣರಾಜ್, ಸಿ.ಎಸ್. ಭಾಸ್ಕರ್, ಎಚ್. ವಾಗೀಶ, ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಕೋಶಾಧ್ಯಕ್ಷ ಎನ್. ಮಂಜುನಾಥ, ಸಂಘಟನಾ ಕಾರ್ಯದರ್ಶಿ ನಾರಾಯಣಬಾಬು ಮತ್ತಿತರರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.