ಎಸ್.ಜೆ.ಏಳುಕೋಟಿ, ಜನಜೀವಾಳ ಜಾಲ:
ಒಂದು ಕಾಲದಲ್ಲಿ ಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕಿಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಎರಡು ಸಕ್ಕರೆ ಕಾರ್ಖಾನೆಗಳ ಒಡತಿ. ಜೊತೆಗೆ ಸಹಕಾರಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಹಲವು ಸೊಸೈಟಿಗಳನ್ನು ಸ್ಥಾಪನೆ ಮಾಡುವ ಮೂಲಕ ಅವರು ಜನರ ಸ್ವಾವಲಂಬಿ ಮತ್ತು ಆರ್ಥಿಕ ಬೆನ್ನೆಲುಬಾಗಿ ಜನತೆಗೆ ನೆರವಾಗುತ್ತಿದ್ದಾರೆ. ಹೆಬ್ಬಾಳ್ಕರ್ ಅವರು ಆರಂಭದ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಅವರು ಹತಾಶರಾಗಲಿಲ್ಲ. ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸಿ ಅವರು ಜನರ ಪ್ರೀತಿಗೆ ಪಾತ್ರರಾದರು. ಜನರ ಮನಸ್ಸು ಗೆದ್ದರು. ಈ ಮೂಲಕ ಇದೀಗ ಸತತವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ತೀರಾ ಹಿಂದುಳಿದ ಪ್ರದೇಶವಾಗಿದೆ. ಅಭಿವೃದ್ಧಿ ಕನಸು ಗಗನ ಕುಸುಮವೇ ಸರಿ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಕ್ಷೇತ್ರದ ಶಾಸಕರಾದ ನಂತರ ಇಡೀ ಕ್ಷೇತ್ರದ ಚಿತ್ರಣ ಬದಲಾಗಿದೆ. ಈಗ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಎದ್ದು ಕಾಣುತ್ತಿದೆ. ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಸಕಲ ಮೂಲಭೂತ ಸೌಕರ್ಯಗಳು ಪಡೆದುಕೊಂಡಿದೆ. ಇಡೀ ಕ್ಷೇತ್ರದ ಅಭಿವೃದ್ಧಿ ಚಿತ್ರಣ ಬದಲಾಗಿದೆ. ಜಿಲ್ಲೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಿದೆ.
ತಾನು ಹಿಡಿದ ಕೆಲಸವನ್ನು ಬೆಂಬಿಡದೆ ಮಾಡುವ ಛಲ ಹೊಂದಿರುವ ಹೆಬ್ಬಾಳ್ಕರ್ ಅವರು ಜನತೆಯ ಆತ್ಮ ವಿಶ್ವಾಸದ ಪ್ರತೀಕವಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಮಾಡುವ ಕೆಲಸಗಳು ಪ್ರತಿಯೊಬ್ಬರ ಮನ ಮೆಚ್ಚುವಂತಿವೆ. ಸಚಿವೆಯಾಗಿ ಯಶಸ್ವಿ ಖಾತೆಯನ್ನು ನಿಭಾಯಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ರಾಜ್ಯದ ಅತ್ಯಂತ ಪ್ರಭಾವಿ ಸಚಿವೆಯಾಗಿ ಬೆಳೆದು ನಿಂತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ರಿಯಾಶೀಲ ಸಚಿವೆಯಾಗಿ ಇತರ ಸಚಿವರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಇದನ್ನು ಸ್ವತಃ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯೇ ಸಾರ್ವಜನಿಕ ವೇದಿಕೆಗಳಲ್ಲಿ ಅವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅವರಲ್ಲಿರುವ ಪ್ರತಿಭೆಗೆ ಸಾಕ್ಷಿಯಾಗಿದೆ.
ಒಬ್ಬ ಮಹಿಳೆಯಾಗಿ ಇಡೀ ರಾಜ್ಯವನ್ನು ಸುತ್ತಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕನಸು ಕಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮದೇ ಆದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಹಂಬಲ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಅವುಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಬೆಳಗಾವಿಗೆ ನ್ಯಾಯೋಚಿತವಾಗಿ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವ ಹೆಬ್ಬಯಕೆ ಅವರದ್ದಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ರಾಜ್ಯದ ಜನತೆಯ ಅಚ್ಚುಮೆಚ್ಚಿನ ಸಚಿವೆ. ಅವರ ಮಾತುಗಾರಿಕೆ, ಕೆಲಸಗಳನ್ನು ಮೆಚ್ಚದವರೆ ಅಪರೂಪ. ಒಟ್ಟಾರೆಯಾಗಿ ಹೇಳುವುದಾದರೆ ಲಕ್ಷ್ಮೀ ಹೆಬ್ಬಾಳ್ಕರ್ ಜನ ಮೆಚ್ಚಿದ ಸಚಿವೆ. ಜೊತೆಗೆ ಯಶಸ್ವಿ ಕೆಲಸಗಾರ್ತಿಯೂ ಹೌದು.