ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಹೆಸರಾಂತ ಆಟಗಾರ ವಿರಾಟ್ ಕೊಹ್ಲಿ ಅವರು ಸದ್ಯದಲ್ಲೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡುವ ಸುದ್ದಿ ಇದೀಗ ರೆಕ್ಕೆ ಪುಕ್ಕ ಪಡೆದುಕೊಂಡಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಎರಡು ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಇದೀಗ ರೋಹಿತ್ ಬೆನ್ನಿಗೆ ವಿರಾಟ್ ಕೊಹ್ಲಿ ಅವರು ಸಹ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಮುಂದಾಗಿದ್ದು ಈ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿರುವುದಾಗಿ ಮಾಹಿತಿ ಲಭಿಸಿದೆ.
ಇಂಗ್ಲೆಂಡ್ ಸರಣಿಗೆ ಮೊದಲು ವಿದಾಯ ಹೇಳುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು ಅದಕ್ಕೆ ತಾನು ಅಲಭ್ಯರಾಗುವುದಾಗಿ ವಿರಾಟ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳು ಕೊಹ್ಲಿ ಅವರಿಗೆ ತಮ್ಮ ನಿರ್ಧಾರವನ್ನು ಮರು ಪರಿಶೀಲನೆ ನಡೆಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಈ ಮೊದಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರು ಏಕಕಾಲಕ್ಕೆ ಅಂತರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು. ವಿರಾಟ್ ಕೊಹ್ಲಿ ಅವರು 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು 30 ಶತಕಗಳ ಸಹಿತ 9230 ಗಳಿಸಿದ್ದಾರೆ.