ನವದೆಹಲಿ : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಜಂಟಿ ದಾಳಿ ಮಾಡಿ ಉಗ್ರರ ನೆಲೆಗಳನ್ನು ಉಡೀಸ್ ಮಾಡಿದೆ. ಆಪರೇಷನ್ ಸಿಂಧೂರ್ ನಂತರ ಭಾರತೀಯ ಸೇನಾಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ಇಬ್ಬರು ಮಹಿಳಾ ಅಧಿಕಾರಿಗಳೇ ಮುಖ್ಯ ಮಾಹಿತಿ ನೀಡಿದರು. ಇದರಲ್ಲಿ ಒಬ್ಬರ ಹೆಸರು ಸೋಫಿಯಾ ಖುರೇಷಿ. ಇನ್ನೊಬ್ಬರ ಹೆಸರು ವ್ಯೋಮಿಕಾ ಸಿಂಗ್. ಸೋಫಿಯಾ ಖುರೇಷಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರೆ, ವ್ಯೋಮಿಕಾ ಸಿಂಗ್ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದಾರೆ. ಸೋಫಿಯಾ ಖುರೇಷಿ ಬಗ್ಗೆ ಇಲ್ಲಿದೆ ಮಾಹಿತಿ.
ಸೋಫಿಯಾ ಖುರೇಷಿ ಹಿನ್ನೆಲೆ:
ಸೋಫಿಯಾ ಖುರೇಷಿ ಮೂಲತಃ ಗುಜರಾತ್ನವರು. ಅವರು 1981 ರಲ್ಲಿ ಗುಜರಾತ್ನ ವಡೋದರಾದಲ್ಲಿ ಜನಿಸಿದ್ದ ಅವರು, ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಫಿಯಾ ಅಜ್ಜ ಭಾರತೀಯ ಸೇನೆಯಲ್ಲಿದ್ದರು. ಅವರ ತಂದೆ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.
1999 ರಲ್ಲಿ ಸೇನೆ ಸೇರಿದ್ದ ಸೋಫಿಯಾ ಖುರೇಷಿ:
ಸೋಫಿಯಾ ಖುರೇಷಿ 1999 ರಲ್ಲಿ ಭಾರತೀಯ ಸೇನೆಗೆ ಸೇರಿದರು. ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಇದಾದ ನಂತರ, ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸೋಫಿಯಾ ನೇಮಕಗೊಂಡರು. ಸೋಫಿಯಾ 2006 ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2010 ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡರು. ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಅವರಿಂದ ಪ್ರಶಂಸಾ ಪತ್ರವನ್ನು ಸಹ ಪಡೆದಿದ್ದಾರೆ. ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಮಾಡಿದ ಅತ್ಯುತ್ತಮ ಕೆಲಸಕ್ಕಾಗಿ ಸಿಗ್ನಲ್ ಆಫೀಸರ್ ಇನ್ ಚೀಫ್ ಅವರಿಂದ ಪ್ರಶಂಸಾ ಪತ್ರವನ್ನು ಸಹ ಪಡೆದಿದ್ದಾರೆ.
ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಸೋಫಿಯಾ ಖುರೇಷಿ:
ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ 2016 ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿ ಗಮನ ಸೆಳೆದಿದ್ದರು. ನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಬಹುರಾಷ್ಟ್ರೀಯ ಮಿಲಿಟರಿ ಕವಾಯತನ್ನು ‘ಎಕ್ಸರ್ಸೈಸ್ ಫೋರ್ಸ್ 18’ ಎಂದು ಹೆಸರಿಸಲಾಗಿತ್ತು. ಇದು ಆ ಸಮಯದಲ್ಲಿ ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತು ಆಗಿತ್ತು.
ಆ ಕವಾಯತಿನಲ್ಲಿ ಭಾಗವಹಿಸಿದ್ದ 18 ತಂಡಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಏಕೈಕ ಮಹಿಳಾ ಅಧಿಕಾರಿಯಾಗಿದ್ದರು. ಭಾರತೀಯ ತಂಡದಲ್ಲಿ ಒಟ್ಟು 40 ಸದಸ್ಯರಿದ್ದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವಿವರಿಸಿದ ಕರ್ನಲ್ ಸುಫೀಯಾ ಪತಿ ಬೆಳಗಾವಿಯವರು
ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ 26 ಜನ ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರತಿಕಾರ ತೀರಿಸಿಕೊಂಡು ಪಾಕಿಸ್ತಾನ ಅಡಗುತಾಣದ ಮೇಲೆ ಆಪರೇಷನ್ ಸಿಂಧೂರ್ ನಡೆಸಿದ ಘಟನೆಯನ್ನು ವಿವರಿಸಿದ ವೀರ ಸೇನಾನಿ ಕರ್ನಲ್ ಸುಫೀಯಾ ಕುರೇಶಿ ಬೆಳಗಾವಿಯ ಸೊಸೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಹತ್ಯೆಯಾದ ಪ್ರತಿಕಾರಕ್ಕೆ ಇಡೀ ದೇಶವೇ ಬೆಂಕಿ ಕಾರುತ್ತಿತ್ತು. ಭಾರತೀಯ ನಾರಿಯರ ಕುಂಕುಮ ಅಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕೆಂದು ಪ್ರತಿಯೊಬ್ಬ ಭಾರತೀಯರು ಹಾತೊರೆಯುತ್ತಿದ್ದರು. ಬುಧವಾರ ಬೆಳಗ್ಗೆ ಒಂದು ಗಂಟೆಗೆ ಭಾರತೀಯ ಸೈನಿಕರು ವೈಮಾನಿಕ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಉಗ್ರರ ಹೆಡೆಮುರಿ ಕಟ್ಟಿ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದನ್ನು ಎಳೆ ಎಳೆಯಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವಿವರಿಸಿದ್ದು ಬೆಳಗಾವಿಯ ಸೊಸೆ ಕರ್ನಲ್ ಸುಫೀಯಾ ಎನ್ನುವುದು ಭಾರತೀಯರ ಹೆಮ್ಮೆಯಾಗಿದೆ.
ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದಾರೆ. ಸುಫೀಯಾ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ. ಪತಿ, ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.
ಸುಫೀಯಾ ಪತಿ ತಾಜುದ್ದೀನ್ ಬಾಗೇವಾಡಿ ಸಹ ಕರ್ನಲ್ ಆಗಿದ್ದಾರೆ. ಕಳೆದ 2015 ರಲ್ಲಿ ಮ್ಯಾರೇಜ್ ಆಗಿರೋ ತಾಜುದ್ದೀನ್ ಸುಫೀಯಾ ಅವರದ್ದು ಪ್ರೇಮ ವಿವಾಹವಾಗಿದ್ದಾರೆ. ಕರ್ನಲ್ ಸುಫೀಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಸದ್ಯ ಸುಫೀಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.