ಇಸ್ಲಾಮಾಬಾದ್ : ಪಾಕಿಸ್ತಾನವು ತನ್ನ ಜನರ ಮೇಲೆ ಭಾರತಕ್ಕಿಂತ ಹೆಚ್ಚು ದಬ್ಬಾಳಿಕೆ ನಡೆಸುತ್ತಿದೆ, ಆದ್ದರಿಂದ ಭಾರತದ ಜೊತೆ ಯುದ್ಧ ನಡೆದರೆ ಪಾಕಿಸ್ತಾನವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನದ ಪ್ರಮುಖ ಧರ್ಮಗುರು ಹೇಳಿದ್ದಾರೆ.
ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಸೇನೆ ಭಾರತದ ವಿರುದ್ಧ ವಿವಿಧ ಪ್ಲ್ಯಾನ್ಗಳಲ್ಲಿ ನಿರತವಾಗಿದ್ದರೂ, ಪಾಕಿಸ್ತಾನಿ ಧರ್ಮಗುರುಗಳು ಮಾತ್ರ ಪಾಕಿಸ್ತಾನ-ಭಾರತದ ಮಧ್ಯೆ ಯುದ್ಧ ನಡೆದರೆ ಭಾರತದ ಜೊತೆ ನಿಲ್ಲುವಂತೆ ತಮ್ಮ ಅನುಯಾಯಿಗಳಿಗೆ ಕರೆ ನೀಡಿರುವ ವೀಡಿಯೊ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ, ಇಸ್ಲಾಮಾಬಾದ್ನ ಲಾಲ್ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಅಜೀಜ್ ಘಾಜಿ – ತಮ್ಮ ಸಭೆಯಲ್ಲಿ ಸೇರಿದ್ದವರಿಗೆ ಆಶ್ಚರ್ಯಕರ ಪ್ರಶ್ನೆಯನ್ನು ಕೇಳುತ್ತಾರೆ, “ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆದರೆ, ನಿಮ್ಮಲ್ಲಿ ಎಷ್ಟು ಮಂದಿ ಪಾಕಿಸ್ತಾನವನ್ನು ಬೆಂಬಲಿಸುತ್ತೀರಿ? ಎಂದು ಅವರು ಪ್ರಶ್ನಿಸಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ದೀರ್ಘಕಾಲದವರೆಗೆ ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ, ಅಬ್ದುಲ್ ಅಜೀಜ್ ತನ್ನ ತೀರ್ಪು ನೀಡುವ ಮೊದಲು ಭಾರತದ ಜೊತೆ ಯುದ್ಧದ ಸಂದರ್ಭದಲ್ಲಿ ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ..? ಎಂದು ಪ್ರಶ್ನಿಸಿ ಬೆಂಬಲಿಸವವರಿಗೆ ಕೈ ಎತ್ತುವಂತೆ ಸೂಚಿಸುತ್ತಾರೆ. ಆದರೆ ಯಾರೂ ಕೈ ಎತ್ತುವುದಿಲ್ಲ. ಅಬ್ದುಲ್ ಅಜೀಜ್ ತಮ್ಮ ಪ್ರೇಕ್ಷಕರನ್ನು ನೋಡಿ “ಇದರರ್ಥ ಅನೇಕರು ಈಗ ಪ್ರಬುದ್ಧರಾಗಿದ್ದಾರೆ” ಎಂದು ಹೇಳುತ್ತಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ಈ ವೀಡಿಯೊದಲ್ಲಿ, ಅಬ್ದುಲ್ ಅಜೀಜ್ ಪಾಕಿಸ್ತಾನಿ ಮಿಲಿಟರಿಯನ್ನು ಖಂಡಿಸುವುದು, ಅಧಿಕಾರಿಗಳು ವ್ಯಾಪಕ ದಬ್ಬಾಳಿಕೆ ನಡೆಸುತ್ತಾರೆ ಎಂದು ಹೇಳಿರುವುದು ಮತ್ತು ಪಾಕಿಸ್ತಾನದ ಆಡಳಿತವು ಭಾರತಕ್ಕಿಂತ ಹೆಚ್ಚು ದಬ್ಬಾಳಿಕೆ ನಡೆಸುತ್ತದೆ ಎಂದು ಹೇಳುವುದು ಕಂಡುಬರುತ್ತದೆ.
“ಲಾಲ್ ಮಸೀದಿ ದುರಂತ ಭಾರತದಲ್ಲಿ ಸಂಭವಿಸಿದೆಯೇ?” ಎಂದು ಅಬ್ದುಲ್ ಅಜೀಜ್ 2007 ರ ಮಸೀದಿಯ ಮುತ್ತಿಗೆಯನ್ನು ಉಲ್ಲೇಖಿಸಿ ಮತ್ತು ನಂತರ ಹಲವಾರು ಸಾವುಗಳನ್ನು ಉಲ್ಲೇಖಿಸಿ ಅಲ್ಲಿದ್ದವರನ್ನು ಪ್ರಶ್ನಿಸಿದ್ದಾರೆ. “ಭಾರತ ತನ್ನದೇ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸುತ್ತದೆಯೇ? ಪಾಕಿಸ್ತಾನದಲ್ಲಿರುವಂತೆ ಭಾರತದಲ್ಲಿ ಜನರು ಕಣ್ಮರೆಯಾಗುತ್ತಿದ್ದಾರೆಯೇ? ಎಂದು ಅವರು ಜನರನ್ನು ಕೇಳಿದ್ದಾರೆ.
ಲಾಲ್ ಮಸೀದಿ ಮತ್ತು ಅದರ ಇತಿಹಾಸ
ಪರ್ವೇಜ್ ಮುಷರಫ್ ಕಾಲದಿಂದಲೂ ಪಾಕಿಸ್ತಾನದ ಪ್ರಕ್ಷುಬ್ಧ ರಾಜಕೀಯದಲ್ಲಿ ಮತ್ತು ಧಾರ್ಮಿಕವಾಗಿ ಲಾಲ್ ಮಸೀದಿ ಬಹಳ ಒಂದು ಘರ್ಷಣಾ ಕೇಂದ್ರವಾಗಿದೆ. ಜುಲೈ 2007 ರಲ್ಲಿ, ಮಸೀದಿ ದೇಶದ ಅತ್ಯಂತ ತೀವ್ರವಾದ ಆಂತರಿಕ ಸಂಘರ್ಷಗಳಲ್ಲಿ ಒಂದಾಗಿತ್ತು. ಇದು ಸರ್ಕಾರಿ ಅಧಿಕಾರಿಗಳಿಗೆ ಸವಾಲನ್ನು ಒಡ್ಡುತ್ತಿದೆ ಎಂದು ಅದರ ವಿರುದ್ಧ ಆರೋಪಿಸಿ.ಭದ್ರತಾ ಪಡೆಗಳು ಮಸೀದಿಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ತಿಂಗಳುಗಟ್ಟಲೆ ಉದ್ವಿಗ್ನತೆ ಹೆಚ್ಚಾದ ನಂತರ, ಅದರ ಮುತ್ತಿಗೆ, ಆಪರೇಷನ್ ಸೈಲೆನ್ಸ್ ಕಾರ್ಯಾಚರಣೆ ನಡೆಯಿತು. ಮಸೀದಿ ವಿದ್ಯಾರ್ಥಿಗಳು ಇಸ್ಲಾಮಾಬಾದ್ನಲ್ಲಿ ಮದ್ಯಪಾನ, ಧೂಮಪಾನ ಮತ್ತು ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ಅಭಿಯಾನಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರು ಬಿಸಿನೆಸ್ ಮೇಲೆ ದಾಳಿ ನಡೆಸಿದರು, ಮಾಧ್ಯಮ ಸಾಮಗ್ರಿಗಳನ್ನು ಸುಟ್ಟುಹಾಕಿದರು ಮತ್ತು ಸಮಾನಾಂತರ ಷರಿಯಾ ನ್ಯಾಯಾಲಯವನ್ನು ಸ್ಥಾಪಿಸಿದರು. ಆದರೆ, ಪೇಶಾವರದಲ್ಲಿ ಚೀನೀ ಕಾರ್ಮಿಕರ ಹತ್ಯೆಯ ನಂತರ ಪಾಕಿಸ್ತಾನವು ಭಯೋತ್ಪಾದಕ ಕೃತ್ಯಮಿತ್ರ ಚೀನಾದಿಂದ ತೀವ್ರ ಖಂಡನೆಗೆ ಒಳಗಾದ ನಂತರ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಪ್ರಯತ್ನಗಳು ವಿಫಲವಾದ ನಂತರ, ಪಾಕಿಸ್ತಾನಿ ಪಡೆಗಳು ಮಸೀದಿಗೆ ನುಗ್ಗಿ ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದವು.
ಸೈನ್ಯವು ಅಂತಿಮವಾಗಿ ಮಸೀದಿಯ ಮೇಲೆ ಹಿಡಿತ ಸಾಧಿಸಿದರೂ, ಕಾರ್ಯಾಚರಣೆಯು ಪಾಕಿಸ್ತಾನಿ ಸಮಾಜದಲ್ಲಿ ಬಿರುಕುಗಳನ್ನು ಹೆಚ್ಚಿಸಿತು, ಮತ್ತು ಅಬ್ದುಲ್ ಅಜೀಜ್ ಅವರನ್ನು ವಿವಾದಾತ್ಮಕ ವ್ಯಕ್ತಿಯಾಗಿ ಪರಿವರ್ತಿಸಿತು. ಅವರ ಸಹೋದರ ಮತ್ತು ಸಹ-ನಾಯಕ ಅಬ್ದುಲ್ ರಶೀದ್ ಘಾಜಿ ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟರು.
ಈಗ ತಮ್ಮ ಭಾನುವಾರದ ಬೋಧನೆಯಲ್ಲಿ, ಅಬ್ದುಲ್ ಅಜೀಜ್ ಕಳೆದ ಎರಡು ದಶಕಗಳಲ್ಲಿ ಕಾಣೆಯಾಗಿದ್ದಾರೆಂದು ಹೇಳಲಾದ ಸಾವಿರಾರು ಪಾಕಿಸ್ತಾನಿಗಳನ್ನು ಉಲ್ಲೇಖಿಸಿ ಸರ್ಕಾರ ತನ್ನ ಜನರ ವಿರುದ್ಧವೇ ವ್ಯವಸ್ಥಿತ ಕ್ರೌರ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
“ಪಾಕಿಸ್ತಾನದಲ್ಲಿ ಕಾಣೆಯಾದವರಿಗಾಗಿ ಒಂದು ಚಳುವಳಿ ನಡೆಯುತ್ತಿದೆ” ಎಂದು ಅವರು ಹೇಳಿದರು. “ತಾಯಂದಿರು ಮತ್ತು ಸಹೋದರಿಯರು ಪ್ರತಿಭಟನೆಯಲ್ಲಿ ಕುಳಿತಿದ್ದಾರೆ. ಜನರು ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಹೋಗಿ ಬೇಸತ್ತಿದ್ದಾರೆ, ಹೀಗಾಗಿ ಎಲ್ಲರೂ ದೇವರತ್ತ ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಮಾಮ್ ಪ್ರಕಾರ, ಪಾಕಿಸ್ತಾನಿ ಧರ್ಮಗುರುಗಳಿಂದ ಹೆಚ್ಚಾಗಿ ಟೀಕಿಸಲ್ಪಡುವ ಭಾರತ ನಿಜವಾಗಲೂ ಉತ್ತಮವಾಗಿದೆ. ಯಾಕೆಂದರೆ ಪಾಕಿಸ್ತಾನದಲ್ಲಿರುವ ಕೆಲವು ಜನಾಂಗೀಯ ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ತಮ್ಮನ್ನು ಪಾಕಿಸ್ತಾನ ನಡೆಸಿಕೊಳ್ಳುವುದಕ್ಕಿಂತ ಹೆಚ್ಚು ಮೂಲಭೂತ ಸ್ವಾತಂತ್ರ್ಯಗಳನ್ನು ಭಾರತವು ತನ್ನ ಅಲ್ಪಸಂಖ್ಯಾತರಿಗೆ ನೀಡುತ್ತಿದೆ ಎಂದು ನೋಡುತ್ತಾರೆ ಎಂದು ಅವರು ಹೇಳುತ್ತಾರೆ.