ನವದೆಹಲಿ: ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಂಟಾಗಿದ್ದು, “ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆ”ಗಾಗಿ ಮೇ 7 ರಂದು ರಾಜ್ಯಗಳಿಗೆ ಭದ್ರತಾ ಅಣಕು ಕಸರತ್ತುಗಳನ್ನು ನಡೆಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ.
ಕೇಂದ್ರದ ಆದೇಶದ ಸಮಯವು ನಿರ್ಣಾಯಕವಾಗಿದೆ. ಕೊನೆಯ ಬಾರಿಗೆ ಇಂತಹ ಸಮರಾಭ್ಯಾಸವನ್ನು 1971 ರಲ್ಲಿ ನಡೆಸಲಾಯಿತು, ಆ ವರ್ಷದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಇಳಿದವು.
ಗೃಹ ಸಚಿವಾಲಯವು ರಾಜ್ಯಗಳು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
ವಾಯು ದಾಳಿ ಎಚ್ಚರಿಕೆಯ ಸೈರನ್ ಕಾರ್ಯಾಚರಣೆ.
ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕ ರಕ್ಷಣಾ ಅಂಶಗಳ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳಿಗೆ ತರಬೇತಿ.
ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳ ಮಾಹಿತಿ.
ಪ್ರಮುಖ ಕಟ್ಟಡಗಳು, ಸ್ಥಾವರಗಳನ್ನು ಮರೆಮಾಚುವ ವಿಧಾನ.
ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಬಗ್ಗೆ ಪೂರ್ವಾಭ್ಯಾಸ.
ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರು 26 ನಾಗರಿಕರನ್ನು ಹೊಡೆದುರುಳಿಸಿದ ಪಹಲ್ಗಾಮ್ ದಾಳಿಯ ನಂತರ, ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಪಾಕಿಸ್ತಾನ ಗಡಿಗಳಲ್ಲಿ ಸತತ 11ನೇ ದಿನವೂ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಭಾರತ ಪ್ರತ್ಯುತ್ತರ ನೀಡಿದೆ. ಈ ಮಧ್ಯೆ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಸೇನೆಯನ್ನು ಸಜ್ಜುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮೇ 5) ಸಂಜೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ರಷ್ಯಾ ಘೋಷಿಸಿದೆ.
ಪಾಕಿಸ್ತಾನ ಮಿಲಿಟರಿ ಸೋಮವಾರ ಖಂಡಾಂತರ ಕ್ಷಿಪಣಿಯ 2ನೇ ಪರೀಕ್ಷೆ ನಡೆಸಿತು. 120 ಕಿ.ಮೀ. ವ್ಯಾಪ್ತಿಯಲ್ಲಿ ಚಲಿಸಬಲ್ಲ ಫತಾಹ್ ಸರಣಿಯ ಖಂಡಾಂತರ ಕ್ಷಿಪಣಿಯನ್ನು ಪಾಕಿಸ್ತಾನ ಸೇನೆಯು ಪರೀಕ್ಷಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ತಿಳಿಸಿದೆ. 450 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಮೇ 3ರಂದು ಪರೀಕ್ಷಿಸಲಾಗಿತ್ತು. 3 ದಿನಗಳ ಅಂತರದಲ್ಲಿ ಪಾಕ್ ನಡೆಸುತ್ತಿರುವ 2ನೇ ಪ್ರಯೋಗ ಇದಾಗಿದೆ.