ಬೆಳಗಾವಿ: ಟ್ಯೂಶನ್ ಹೇಳಿಕೊಡುತ್ತಿದ್ದ ಶಿಕ್ಷಕಿಯೊಂದಿಗೆ ಸಲುಗೆ ಬೆಳೆಸಿಕೊಂಡ ಪಾಲಕನೊಬ್ಬ, ವಿಡಿಯೊ ಕಾಲ್ನಲ್ಲಿ ಮಾತನಾಡಿ ಅದರ ದಾಖಲೆಗಳನ್ನು ಇಟ್ಟುಕೊಂಡು ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಈಗಾಗಲೇ ರೂ. 7.75 ಲಕ್ಷ ಹಣ ಹಾಗೂ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಿತ್ತುಕೊಂಡಿದ್ದಾನೆ.
ರಾಯಬಾಗ ತಾಲೂಕು ದಾವನಕಟ್ಟಿ ಗ್ರಾಮದ ಶಿವನಾಯಕ ಯಳ್ಳೂರೆ ವಂಚಿಸಿದವ.
ಶಿವನಾಯಕ ಯಳ್ೞೂರೆ ತಮ್ಮ 5 ನೇ ತರಗತಿ ಓದುತ್ತಿದ್ದ ಪುತ್ರಿಯನ್ನು ಟ್ಯೂಷನ್ಗೆ ಕಳಿಸಿದ್ದ. ಟ್ಯೂಷನ್ ಹೇಳುತ್ತಿದ್ದ ಶಿಕ್ಷಕಿಯ ಮೊಬೈಲ್ ನಂಬರ್ ಇಟ್ಟುಕೊಂಡು ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಶಿಕ್ಷಕಿಯು ಸಹಾ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದರು.
ಆರೋಪಿ ಆಗಾಗ ವಿಡಿಯೊ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡಿದ್ದ. ಅದನ್ನು ಇಟ್ಟುಕೊಂಡು ರೂ. 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಶಿಕ್ಷಕಿಯ ಪತಿಗೂ ಕರೆ ಮಾಡಿ ಹಣ ಕೇಳಿದ್ದ. ಹಣ ಕೊಡದೇ ಇದ್ದರೆ ವಿಡಿಯೊ ಕಾಲ್ನ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆಯೊಡ್ಡಿದ್ದ.
2024 ರ ಏಪ್ರಿಲ್ನಿಂದ ಇದುವರೆಗೂ 13.75 ಲಕ್ಷದ ವಸ್ತುಗಳನ್ನು ಶಿಕ್ಷಕಿ ನೀಡಿದ್ದಾರೆ. ಕೊನೆಗೂ ಈ ವಿಷಯ ಶಿಕ್ಷಕಿಯ ಮೈದುನನಿಗೆ ಗೊತ್ತಾದ ಬಳಿಕ, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಬೆಳಗಾವಿಯ ಜಿಲ್ಲಾ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.