ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಲ್ಬಣಗೊಂಡ ನಡುವೆಯೇ ಪಾಕಿಸ್ತಾನ ಸೇನೆಯು ನಿರ್ಣಾಯಕ ಫಿರಂಗಿ ಮದ್ದುಗುಂಡುಗಳ ತೀವ್ರ ಕೊರತೆ ಎದುರಿಸುತ್ತಿದೆ ಹಾಗೂ ಅದರ ಯುದ್ಧ ಸಾಮರ್ಥ್ಯವು ಕೇವಲ ನಾಲ್ಕು ದಿನಗಳವರೆಗೆ ಇರುತ್ತದೆ ಎಂದು ವರದಿಗಳು ತಿಳಿಸಿವೆ.
ಉಕ್ರೇನ್ ಜೊತೆ ಇತ್ತೀಚಿನ ಶಸ್ತ್ರಾಸ್ತ್ರ ಒಪ್ಪಂದಗಳಿಂದಾಗಿ ಪಾಕಿಸ್ತಾನವು ಫಿರಂಗಿ ಮದ್ದುಗುಂಡುಗಳ ತೀವ್ರ ಕೊರತೆ ಎದುರಿಸುತ್ತಿದ್ದು, ಇದು ಅದರ ಯುದ್ಧ ಹೋರಾಟದ ಸಾಮರ್ಥ್ಯವನ್ನು ಕೇವಲ ನಾಲ್ಕು ದಿನಗಳಿಗೆ ಸೀಮಿತಗೊಳಿಸುತ್ತದೆ ಎಂದು ವರದಿಗಳು ಹೇಳಿವೆ.
ಪ್ರಾದೇಶಿಕ ಸಂಘರ್ಷದ ಭಯದ ನಡುವೆ, ಮಿಲಿಟರಿಗೆ ಸರಬರಾಜು ಮಾಡುವ ಪಾಕಿಸ್ತಾನ ಆರ್ಡನೆನ್ಸ್ ಫ್ಯಾಕ್ಟರಿಗಳು (POF), ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಮತ್ತು ಹಳೆಯ ಉತ್ಪಾದನಾ ಘಟಕಗಳ ನಡುವೆ ಸರಬರಾಜುಗಳನ್ನು ಪೂರೈಸಲು ಹೆಣಗಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಮೇಲೆ ಮಿಲಿಟರಿ ಕ್ರಮ ಕೈಗೊಳ್ಳುತ್ತದೆ ಎಂದು ಅನೇಕ ಪಾಕಿಸ್ತಾನಿ ನಾಯಕರು ಹೇಳಿಕೊಂಡಿದ್ದಾರೆ. “ಭಾರತೀಯ ಆಕ್ರಮಣಕ್ಕೆ ತಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಈ ವರದಿಗಳು ಪಾಕಿಸ್ತಾನ ನಾಯಕರು ಹೇಳಿಕೊಂಡಷ್ಟು ಆಶಾದಾಯಕವಾಗಿಲ್ಲ ಎಂದು ವರದಿಗಳು ಸೂಚಿಸುತ್ತವೆ.
ಮದ್ದುಗುಂಡುಗಳ ಸರಬರಾಜು ಕಡಿಮೆಯಾಗಿದ್ದರಿಂದ ಪಾಕಿಸ್ತಾನದ ಸಂಗ್ರಹಿಸಿಟ್ಟ ಯುದ್ಧಸಾಮಗ್ರಿಗಳು ಕೇವಲ 96 ಗಂಟೆಗಳ ವರೆಗೆ ಸಂಘರ್ಷವನ್ನು ತಡೆದುಕೊಳ್ಳಬಲ್ಲದು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮಿಲಿಟರಿಯು ಭಾರತದ ಸಂಖ್ಯಾತ್ಮಕ ಶ್ರೇಷ್ಠ ಸೈನ್ಯವನ್ನು ಎದುರಿಸಲು ಅದು ಅವಲಂಬಿಸಿರುವ M109 ಹೊವಿಟ್ಜರ್ಗಳಿಗೆ ಅಥವಾ ಅದರ BM-21 ವ್ಯವಸ್ಥೆಗಳಿಗೆ 122mm ರಾಕೆಟ್ಗಳಿಗೆ ಬೇಕಾದಷ್ಟು 155mm ಶೆಲ್ಗಳನ್ನು ಹೊಂದಿಲ್ಲ.
ಏಪ್ರಿಲ್ನಲ್ಲಿ X ನಲ್ಲಿ ಹಲವಾರು ಪೋಸ್ಟ್ಗಳು 155mm ಫಿರಂಗಿ ಶೆಲ್ಗಳನ್ನು ಉಕ್ರೇನ್ ನತ್ತ ತಿರುಗಿಸಲಾಗಿದೆ ಎಂದು ಹೇಳಿಕೊಂಡಿವೆ, ಇದರಿಂದಾಗಿ ದಾಸ್ತಾನುಗಳು ಅಪಾಯಕಾರಿ ಮಟ್ಟದಲ್ಲಿ ಕಡಿಮೆಯಾಗಿವೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ರಕ್ಷಣಾ ವಿಭಾಗವು ನಿರ್ಣಾಯಕ ಮದ್ದುಗುಂಡುಗಳ ಕೊರತೆಯ ಬಗ್ಗೆ ಭಯಭೀತವಾಗಿದೆ. ಮೇ 2 ರಂದು ನಡೆದ ವಿಶೇಷ ಕಾರ್ಪ್ಸ್ ಕಮಾಂಡರ್ಗಳ ಸಮ್ಮೇಳನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಗುಪ್ತಚರ ವರದಿಗಳನ್ನು ಉಲ್ಲೇಖಿಸಿ, ಮೂಲಗಳು ಭಾರತದ ಸಂಭಾವ್ಯ ದಾಳಿಯ ನಿರೀಕ್ಷೆಯಲ್ಲಿ ಪಾಕಿಸ್ತಾನವು ಭಾರತ-ಪಾಕಿಸ್ತಾನ ಗಡಿಯ ಬಳಿ ಮದ್ದುಗುಂಡು ಡಿಪೋಗಳನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿವೆ.
ಹಿಂದೆ, ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮಿಲಿಟರಿ ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡಿದ್ದರು. ದೀರ್ಘಕಾಲದ ಸಂಘರ್ಷದ ಸಂದರ್ಭದಲ್ಲಿ ಭಾರತವನ್ನು ಎದುರಿಸಲು ಪಾಕಿಸ್ತಾನಕ್ಕೆ ಮದ್ದುಗುಂಡುಗಳು ಮತ್ತು ಆರ್ಥಿಕ ಶಕ್ತಿಯ ಕೊರತೆಯಿದೆ ಎಂದು ಹೇಳಿದ್ದರು.
ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಬೇಡಿಕೆಗಳನ್ನು ಪೂರೈಸುವ ಪಾಕಿಸ್ತಾನದ ನಿರ್ಧಾರವು “ಆರ್ಥಿಕ ಬಿಕ್ಕಟ್ಟನ್ನು” ಸಮತೋಲನಗೊಳಿಸುವ ಪ್ರಯತ್ನವಾಗಿದೆ. ಆದರೆ ಇದು ಈಗ ಭಾರತದ ಜೊತೆಗಿನ ಯುದ್ಧ ಭೀತಿಯ ನಡುವೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹೆಚ್ಚಿನ ಹಣದುಬ್ಬರ, ಹೆಚ್ಚುತ್ತಿರುವ ಸಾಲ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲುಗಳಿಂದ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮಿಲಿಟರಿಯ ಕಾರ್ಯಾಚರಣೆಯ ಸಾಮರ್ಥ್ಯಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಇಂಧನ ಕೊರತೆಯಿಂದಾಗಿ ಸೈನ್ಯವು ಪಡಿತರ ಕಡಿತ ಮಾಡಿದೆ, ಮಿಲಿಟರಿ ತಯಾರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಲ್ಪಟ್ಟಿದೆ.