ಬೆಳಗಾವಿ: ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿರುವ ನಿತ್ಯ ಹೆಸರಿನ ಹೆಣ್ಣು ಹುಲಿ ಮತ್ತು ಬೃಂಗಾ ಹೆಸರಿನ ಹೆಣ್ಣು ಸಿಂಹಿಣಿಯನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಪ್ರಾಣಿ ಸಂಗ್ರಹಾಲಯಕ್ಕೆ ಬಿಡುಗಡೆ ಮಾಡಿದರು.
ಇತ್ತೀಚಿಗೆ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ‘ನಿರುಪಮಾ’ ಎಂಬ ಸಿಂಹಿಣಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಅದಾದ ಬಳಿಕ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಬೃಂಗಾ ಹೆಸರಿನ ಈ ಸಿಂಹಿಣಿ ಹಾಗೂ ಮೈಸೂರಿನಿಂದ ನಿತ್ಯ ಹೆಸರಿನ ಹೆಣ್ಣು ಹುಲಿಯನ್ನು ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯಕ್ಕೆ ಕರೆತರಲಾಗಿತ್ತು. ಕೆಲ ದಿನ ಕ್ವಾರಂಟೈನ್ನಲ್ಲಿದ್ದ ನಿತ್ಯ ಹಾಗೂ ಬೃಂಗಾ ಸಿಂಹಿಣಿಯನ್ನು ಇಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸಾರ್ವಜನಿಕರ ವೀಕ್ಷಣೆಗೆಂದು ಪ್ರಾಣಿ ಆವರಣಕ್ಕೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು, ಉತ್ತರ ಕರ್ನಾಟಕದ ಜನ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ದೂರದ ಬನ್ನೇರುಘಟ್ಟ, ಮೈಸೂರು, ಶಿವಮೊಗ್ಗ, ಹಂಪಿಗೆ ಹೋಗಬೇಕಿತ್ತು. ಆದರೆ, ಈಗ ಹಚ್ಚ ಹಸಿರಿನಿಂದ 125 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬೆಳಗಾವಿಯ ಭೂತರಾಮನಹಟ್ಟಿಯ ಕಿರು ಮೃಗಾಲಯ ಸಾರ್ಜನಿಕರ ಆಕರ್ಷಕ ಕೇಂದ್ರ ಬಿಂದುವಾಗಿದೆ. ಪ್ರವಾಸಿಗರು ಇಲ್ಲಿ ಆಗಮಿಸಿದರೆ ಇಲ್ಲಿರುವ 25 ಪ್ರಭೇದಗಳ ಒಟ್ಟು 198 ಪ್ರಾಣಿ–ಪಕ್ಷಿಗಳನ್ನು ವೀಕ್ಷಣೆ ಮಾಡಬಹುದು ಎಂದು ಹೇಳಿದರು.
ಮೃಗಾಲಯ ವೀಕ್ಷಿಸಿದ ಸಂಸದೆ: ಭುತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕ ವಾಹನದ ಮೂಲಕ ಸಂಚರಿಸಿ ಮೃಗಾಲಯದಲ್ಲಿರುವ 25 ಪ್ರಭೇದಗಳ ಒಟ್ಟು 198 ಪ್ರಾಣಿ–ಪಕ್ಷಿಗಳನ್ನು ವೀಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಇದೇ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಅವರು ಸಿಂಹಿಣಿಯ ಭಾವಚಿತ್ರವಿರುವ ಫೋಟೋ ನೀಡಿ ಗೌರವಿಸಿದರು. ಈ ವೇಳೆ ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಜಿ.ಎಚ್. ಕುದರಿ, ಡಾ. ನಾಗೇಶ ಹುಹಿಲಗೋಳ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.