ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಉಳಿಸಿಕೊಳ್ಳಲಾಗಿದೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಮತ್ತು ಸಂಘಟನಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೆ.19ರಿಂದ ಅ.4ರವರೆಗೆ ಜಪಾನ್ನಲ್ಲಿ ಕೂಟ ನಡೆಯಲಿದೆ. ನಗೋಯಾ ಸಿಟಿ ಹಾಲ್ನಲ್ಲಿ ಸೋಮವಾರ ನಡೆದ ಸಂಘಟನಾ ಸಮಿತಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಕ್ರಿಕೆಟ್ ಮತ್ತು ಮಿಶ್ರ ಮಾರ್ಷಲ್ ಆರ್ಟ್ಸ್ ಅನ್ನು ಔಪಚಾರಿಕವಾಗಿ ಅನುಮೋದಿಸಲಾಯಿತು ಎಂದು ಒಸಿಎ ತಿಳಿಸಿದೆ.
ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ನಾಲ್ಕನೇ ಬಾರಿ ಸ್ಥಾನ ಪಡೆದಂತಾಗಿದೆ. ಈ ಮೊದಲು ಗುವಾಂಗ್ಝ (2010), ಇಂಚಿಯಾನ್ (2014) ಮತ್ತು ಹಾಂಗ್ಝ (2023) ಕೂಟಗಳಲ್ಲಿ ಕ್ರಿಕೆಟ್ ಸೇರಿತ್ತು. ಭಾರತ ಪುರುಷ ಮತ್ತು ಮಹಿಳಾ ತಂಡಗಳು ಹಾಲಿ ಚಾಂಪಿಯನ್ಗಳಾಗಿವೆ.
‘ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಐಚಿ ಪ್ರಾಂತ್ಯದಲ್ಲಿ ಆಯೋಜಿಸಲು ಚಿಂತಿಸಲಾಗಿದೆ. ಆದರೂ ತಾಣಗಳು ಇನ್ನೂ ಅಂತಿಮಗೊಂಡಿಲ್ಲ. ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್ ಜನಪ್ರಿಯತೆ ಹೊಂದಿದೆ ಮಾತ್ರವಲ್ಲದೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲೂ ಸೇರ್ಪಡೆಗೊಂಡಿರುವುದರಿಂದ ಈ ಕ್ರೀಡೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎಂದು ಒಸಿಎ ಪ್ರಕಟಣೆ ತಿಳಿಸಿದೆ.