ಬೆಳಗಾವಿ: ಜನ ಪ್ರತಿನಿಧಿಯಾಗಿ ನಾನು ಗ್ರಾಮಗಳನ್ನು ಸುಧಾರಣೆ ಮಾಡುವುದಷ್ಟೇ ನನ್ನ ಕೆಲಸ. ನನ್ನ ತಾಯಿ ಅವರ ತವರೂರಾದ ಬಡಾಲ ಅಂಕಲಗಿ ಗ್ರಾಮದ ಬಗ್ಗೆ ವಿಶೇಷ ಗೌರವವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಡಾಲ ಅಂಕಲಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೋಡಿ ಮಹಾಲಕ್ಷ್ಮಿ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಒಬ್ಬ ಮನುಷ್ಯನ ಏಳಿಗೆ ಕಂಡು ಹೊಟ್ಟೆಕಿಚ್ಚು ಮಾಡುವವರಿಗೆ ಮದ್ದಿಲ್ಲ. ಮಾತಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ನನ್ನ ಜವಾಬ್ದಾರಿ ಏನು ಎಂದರೆ ಊರು ಸುಧಾರಣೆ ಮಾಡುವುದು ಎಂದು ಹೇಳಿದರು.
ಮೊದಲ ಎರಡು ಚುನಾವಣೆಯಲ್ಲಿ ಸೋತೆ, ಮೂರನೇ ಸಲ ನಿಂತಾಗ ಈ ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ದೇವರ ಮುಂದೆ ನಿಂತು ಗೆದ್ದರೆ ಗುಡಿ ಕಟ್ಟಿಸಿಕೊಡುವೆ ಅಂತ ಹರಕೆ ಹೊತ್ತುಕೊಂಡೆ. ಅದರಂತೆಯೇ ಗೆದ್ದ ಬಳಿಕ ಗುಡಿ ಕಟ್ಟಿಸಿಕೊಡಲು ನೆರವಾದೆ. ಅಂಕಲಗಿ ಗ್ರಾಮಸ್ಥರ ಬೆಂಬಲ ನನಗೆ ಯಾವಾಗಲೂ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಅಂಕಲಗಿ ಗ್ರಾಮ ಎಂದರೆ ನನ್ನ ಹೃದಯಲ್ಲಿ ವಿಶೇಷ ಸ್ಥಾನವಿದೆ. ಈಗಾಗಲೇ ಗ್ರಾಮಕ್ಕೆ ಮೂರು ಕೋಟಿ ರೂಪಾಯಿ ಕೆಲಸ ಮಾಡಿಕೊಡಲಾಗಿದೆ. ಈ ಬಾರಿ ಅದ್ದೂರಿಯಾಗಿ ಅಂಕಲಗಿ ಜಾತ್ರೆಯನ್ನು ಆಚರಣೆ ಮಾಡಲಾಗಿದೆ. ಹಿಂದೆಂದೂ ಕಾಣದಂತ ಸಂಭ್ರಮ ಗ್ರಾಮಸ್ಥರಲ್ಲಿ ಕಂಡಿದ್ದೇನೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಕಿರುತೆರೆಯ ಕಲಾವಿದರಿಂದ ನಡೆದ ಮನರಂಜನೆ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಚಯ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸವ ದೇವರು, ಸಿದ್ದು ಚಾಪಗಾಂವಿ, ಕಿರುತೆರೆಯ ಕಲಾವಿದರು, ಗ್ರಾಮದ ಹಿರಿಯರು, ಗ್ರಾಮಸ್ಥರು ಸೇರಿದಂತೆ ಜಾತ್ರಾ ಕಮಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.