ನವದೆಹಲಿ : ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ತಮ್ಮ ಪಾದಗಳಿಗೆ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಹರ್ಯಾಣದ ಕೈಥಾಲ್ ನಗರದ ರಾಮಪಾಲ ಕಶ್ಯಪ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿಯವರು ತಾವೇ ತಮ್ಮ ಕೈಯ್ಯಾರೆ ಶೂಗಳನ್ನು ತೊಡಿಸಿದ ಅಪರೂಪದ ವಿದ್ಯಮಾನ ನಡೆದಿದೆ.
ಪ್ರಧಾನಿ ಮೋದಿ ಸೋಮವಾರ ಹರಿಯಾಣದ ಯಮುನಾನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಭಿಮಾನಿಯನ್ನು ಭೇಟಿಯಾದರು, ಅವರು 14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಮೋದಿ ಅವರು ರಾಮಪಾಲ ಕಶ್ಯಪ ಅವರೊಂದಿಗಿನ ಭೇಟಿಯ ವೀಡಿಯೊವನ್ನು X ನಲ್ಲಿ ಹಂಚಿಕೊಂಡಿದ್ದಾರೆ, ಅವರು ಅವರಿಗೆ ಹೊಸ ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದರು ಮತ್ತು ಅವುಗಳನ್ನು ಧರಿಸುವಂತೆ ಮನವಿ ಮಾಡಿದರು.
“ಯಮುನಾನಗರದಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ, ನಾನು ಕೈಥಾಲ್ನ ರಾಮಪಾಲ ಕಶ್ಯಪ ಅವರನ್ನು ಭೇಟಿಯಾದೆ. ನಾನು ಪ್ರಧಾನಿಯಾದ ನಂತರ ಮಾತ್ರ ಪಾದರಕ್ಷೆಗಳನ್ನು ಧರಿಸುತ್ತೇನೆ ಎಂದು ಅವರು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು. ಇಂದು ನನಗೆ ಅವರನ್ನು ಭೇಟಿಯಾಗುವ ಅದೃಷ್ಟ ಸಿಕ್ಕಿತು. ಅವರು ಪ್ರತಿಜ್ಞೆ ಮಾಡಿದ್ದರು… ಇಂದು ನನಗೆ ಅವರನ್ನು ಶೂ ಧರಿಸುವಂತೆ ಮಾಡುವ ಅವಕಾಶ ಸಿಕ್ಕಿತು” ಎಂದು ಹೇಳಿದ್ದಾರೆ.
ಸೋಮವಾರ (ಏ.14) ಪ್ರಧಾನಿ ಮೋದಿ ಹರ್ಯಾಣಕ್ಕೆ ಭೇಟಿ ನೀಡಿ, ಅಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಜೊತೆಗೆ ನಾನಾ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಗೆ ಹಾಗೂ ಸೇವೆಗಳಿಗೆ ಚಾಲನೆ ನೀಡಿದರು. ಹಿಸಾರ್ನಲ್ಲಿ ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಿಂದ ಅಯೋಧ್ಯೆಗೆ ಹೋಗುವ ಮೊದಲ ವಿಮಾನಯಾನಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಹೊಸ ಟರ್ಮಿನಲ್ ಕಟ್ಟಡಕ್ಕೆ ಅಡಿಗಲ್ಲು ಹಾಕಿದರು.
ಏಪ್ರಿಲ್ 14ರಂದು ಹರ್ಯಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಈ ವಿಷಯ ತಿಳಿದು ತಾವು ತಂಗಿದ್ದ ಗೆಸ್ಟ್ ಹೌಸ್ ಗೆ ರಾಮಪಾಲ ಅವರನ್ನು ಕರೆಯಿಸಿಕೊಂಡು ಹೊಸ ಶೂಗಳನ್ನು ಅವರಿಗೆ ಕೊಟ್ಟರು. ರಾಮಪಾಲ ಅವರು ತಮ್ಮ ಕಾಲುಗಳಿಗೆ ಧರಿಸಿ ಖುಷಿಪಟ್ಟರು.
ಈ ಸಂದರ್ಭದಲ್ಲಿ ರಾಮಪಾಲ ಅವರಿಗೆ ಕಿವಿಮಾತು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಎಂದೆಂದಿಗೂ ಇಂತ ಪ್ರತಿಜ್ಞೆ ಮಾಡಬೇಡಿ ಎಂದು ಹೇಳಿದರು.