ಬೆಳಗಾವಿ : ಗ್ರಹಗಳಲ್ಲಿ ಭೂಮಿಯಲ್ಲಿ ಮಾತ್ರ ನೀರಿದೆ. ಇದರಿಂದಾಗಿ ಭೂಮಿಯ ಮೇಲೆ ಜೀವಿಗಳು ಸೃಷ್ಟಿಯಾಗಲು ಸಾಧ್ಯವಾಯಿತು. ಜೀವಿಗಳ ಜೀವಾಮೃತವು ಇಂದು ಬರಿದಾಗುತ್ತಿದೆ ಎಂದು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ, ಬೆಳಗಾವಿಯ ವಿಜ್ಞಾನಿ ಡಾ. ಬಿ. ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ “ವಿಶ್ವ ಜಲ ದಿನದ ಅಂಗವಾಗಿ ಹಿಮನದಿಗಳ ಸಂರಕ್ಷಣೆ ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಾರ್ಚ್ 22ರಂದು ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು .
ಭೂಮಿಯ ಬಹುಪಾಲು ಭಾಗ ನೀರಿನಿಂದ ಆವೃತವಾಗಿದ್ದರೂ ನಮ್ಮ ಸ್ವಾರ್ಥ ಮತ್ತು ಅಜಾಗರೂಕ ಬಳಕೆಯಿಂದಾಗಿ ನೀರಿನ ಸಂಪನ್ಮೂಲಗಳು ಇಂದು ಬರಿದಾಗುವತ್ತ ಸಾಗುತ್ತಿದೆ. ಹೀಗೆ ಮುಂದುವರೆದರೆ ಮುಂದೊಂದು ದಿವಸ ಜೀವಿಗಳಿಗೆ ಯೋಗ್ಯವಾದ ನೀರು ಸಿಗದೇ ಜೀವ ಸಂಕುಲಕ್ಕೆ ಗಂಡಾಂತರ ಬರುತ್ತದೆ. ಇದರ ಕುರಿತು ಬಹು ದೊಡ್ಡ ಜಾಗೃತಿ ಮೂಡಿಸಬೇಕಿದೆ. ಅದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದರ ಜೊತೆಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ ಎಂ. ಜಿ. ಹೆಗಡೆ ಅವರು ನೀರು ಮನುಷ್ಯನ ಮೂಲಭೂತ ಅಗತ್ಯತೆಗಳಲ್ಲಿ ಮೊದಲನೆಯದು. ನೀರಿದ್ದರೆ ಜೀವಸಂಕುಲ. ಮೊದಲು
ನೀರು ಮಲೀನವಾಗದಂತೆ, ಜಲಮೂಲಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಜಲಮೂಲಗಳ ಹೆಚ್ಚಿಸುವತ್ತ ಗಮನಕೊಡಬೇಕು.ನೀರಿನ ಜಾಗೃತಿ ಬಗ್ಗೆ ಮನೆಯಿಂದಲೇ ಆರಂಭವಾಗಬೇಕು. ಹಿರಿಯರಾದವರು ಮಕ್ಕಳಿಗೆ ನೀರಿನ ಮಹತ್ವ ಮತ್ತು ಅದರ ರಕ್ಷಣೆಯ ಬಗ್ಗೆ ತಿಳಿಸಬೇಕು.
ಪ್ರಕೃತಿಯ ಮೇಲೆ ನಮಗಿರುವ ದೃಷ್ಟಿಕೋನ ಬದಲಾದರೆ ಖಂಡಿತ ನಮಗೆ ಅದನ್ನು ಉಳಿಸಿಕೊಳ್ಳುವ ವಿಧಾನಗಳು ಗೋಚರಿಸುತ್ತವೆ. ನೀರು ಕೇವಲ ನೀರಲ್ಲ ಅದು ಸಾಮಾಜಿಕ ನ್ಯಾಯ. ಪ್ರಕೃತಿಯನ್ನು ಆರಾಧನೆಯಿಂದ ನೋಡಿದವರು ನಾವು. ಪಾಶ್ಚಿಮಾತ್ಯ ಜಗತ್ತು ಪ್ರಕೃತಿಯನ್ನು ಸಂಪನ್ಮೂಲವೆಂದು ಹೇಳಿ ಅದನ್ನು ಮನಸೋಇಚ್ಛೆ ಬಳಸಿ ಪೌರಾತ್ಯ ದೇಶಕ್ಕೆ ಬಂದು ಡಂಪ್ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥೆ
ಡಾ. ದೀಪಿಕಾ ದೇವರಮನಿ ವಿದ್ಯಾರ್ಥಿಗಳಿಗೆ ಹವಾಗುಣದ ವೈಪರೀತ್ಯ ಮತ್ತು ಜಲಮೂಲಗಳ ಸಂರಕ್ಷಣೆ ಬಗ್ಗೆ ಪಿಪಿಟಿ ಮೂಲಕ ತೋರಿಸಿದರು.
ವಿದ್ಯಾರ್ಥಿನಿ ಪ್ರಿಯಾಂಕಾ ತಿಲಗರ ಪ್ರಾರ್ಥಿಸಿದರು, ಲಕ್ಷ್ಮಿ ಕೊಳ್ಳಿ ಸ್ವಾಗತಿಸಿದರು. ಕೀರ್ತಿ ಹಲ್ಕಿ ವಂದಿಸಿದರು. ಲಕ್ಷ್ಮಿ ಸಿದ್ದಾಪುರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.