ತಿರುವನಂತಪುರ: ಕೇಂದ್ರದ ಮಾಜಿ ಸಚಿವ ರಾಜೀವ್
ಚಂದ್ರಶೇಖರ್ ಅವರು ಕೇರಳ ಬಿಜೆಪಿ ಘಟಕದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ಸದ್ಯ ಕೆ. ಸುರೇಂದ್ರನ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ.
ಭಾನುವಾರ ತಿರುವನಂತಪುರದಲ್ಲಿ ನಡೆದ ಪಕ್ಷದ ಕೋರ್ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ ಎನ್ನಲಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೋಮವಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷರಾಗಿ ಸುರೇಂದ್ರನ್ ಐದು ವರ್ಷ ಪೂರೈಸಿದ್ದು, ರಾಜೀವ್ ಚಂದ್ರಶೇಖರ್ ಅವರ ಜೊತೆಗೆ ಹಿರಿಯ ನಾಯಕರಾದ ಶೋಭಾ ಸುರೇಂದ್ರನ್ ಹಾಗೂ ಎಂ.ಟಿ ರಮೇಶ್ ಅವರ ಹೆಸರೂ ಚಾಲ್ತಿಯಲ್ಲಿತ್ತು.
ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಮೇಶ್ ಅಥವಾ ಶೋಭಾ ಅವರ ನೇಮಕ ಅಥವಾ ಸುರೇಂದ್ರನ್ ಅವರ ಅವಧಿಯನ್ನು ಮತ್ತಷ್ಟು ವಿಸ್ತರಿಸುವುದರಿಂದ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಪಕ್ಷದ ರಾಷ್ಟ್ರೀಯ ನಾಯಕತ್ವ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ.
ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವರಾಗಿ ಚಂದ್ರಶೇಖರ್ ಕಾರ್ಯನಿರ್ವಹಿಸಿದ್ದರು.
60 ವರ್ಷದ ಚಂದ್ರಶೇಖರ್, ತಿರುವನಂತಪುರಂನಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ನಗರದಲ್ಲಿ ಮನೆಯನ್ನೂ ಖರೀದಿಸಿದ್ದರು. ಅಂದಿನಿಂದ ಅವರು ಬಿಜೆಪಿಯ ಮುಂದಿನ ರಾಜ್ಯ ಅಧ್ಯಕ್ಷರಾಗಬಹುದು ಎಂಬ ಬಲವಾದ ಊಹಾಪೋಹವಿತ್ತು. ಚಂದ್ರಶೇಖರ್ ಅವರು ಆಶಾ ಕಾರ್ಯಕರ್ತರ ಅನಿರ್ದಿಷ್ಟಾವಧಿ ಮುಷ್ಕರ ಸೇರಿದಂತೆ ರಾಜ್ಯದ ಪ್ರಮುಖ ವಿಷಯಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರದಲ್ಲಿ ಕಾಂಗ್ರೆಸ್ ನ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋತಿದ್ದ ಚಂದ್ರಶೇಖರ್, ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಈಗಿನಿಂದಲೇ ಪ್ರಯತ್ನ ಮಾಡುತ್ತಿದ್ದಾರೆ.