ಮುಂಬೈ :
ಭಾರತಕ್ಕೆ ಚೀನಾ ನುಗ್ಗಿದಂತೆ ನಾವು ಸಹಾ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದು ಶಿವಸೇನೆ ಉದ್ದವ್ ಬಾಳಾ ಸಾಹೇಬ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಅವರು ಪ್ರತಿಕ್ರಿಯೆ ನೀಡಿ ಚೀನಾ ಭಾರತಕ್ಕೆ ಪ್ರವೇಶಿಸಿದಂತೆ ನಾವು ಸಹ ಕರ್ನಾಟಕಕ್ಕೆ ನುಗ್ಗಬೇಕಾಗುತ್ತದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಆದರೆ, ಕರ್ನಾಟಕ ಮುಖ್ಯಮಂತ್ರಿಗಳು ಕಿಡಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರ ಇದೆ. ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ದೂರಿದರು.
ಮಹಾರಾಷ್ಟ್ರದ ನಾಗಪುರದಲ್ಲಿ ಚಳಿಗಾಲದ ವಿಶೇಷ ಅಧಿವೇಶನ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಅಜಿತ ಪವಾರ್ ವಿಧಾನಸಭೆಯಲ್ಲಿ ಬೆಳಗಾವಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರದ ಸಂಸದರಿಗೆ ಬೆಳಗಾವಿ ಪ್ರವೇಶಿಸುವುದನ್ನು ತಡೆಯಲಾಗಿದೆ. ಯಾರನ್ನು ತಡೆಯಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಬೆಳಗಾವಿ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದವರಿಗೆ ನಿಷೇಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತನಾಡಿ, ಗಡಿ ಸಮಸ್ಯೆ ಕುರಿತು ಗೃಹ ಸಚಿವರು ಇದೇ ಮೊದಲ ಬಾರಿಗೆ ಮಧ್ಯಸ್ಥಿಕೆ ವಹಿಸಿದ್ದಾರೆ. ಮಹಾರಾಷ್ಟ್ರ ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿದೆ. ನಾವು ನಮ್ಮ ವಾದವನ್ನು ಮುಂದಿಟ್ಟಿದ್ದು ಗಡಿ ವಿಷಯದ ಸಂಬಂಧ ರಾಜಕೀಯ ಮಾಡಬಾರದು. ಗಡಿ ಭಾಗದ ಮರಾಠಿಗರ ಜೊತೆ ನಾವು ನಿಂತುಕೊಳ್ಳಬೇಕಾಗಿದೆ ಎಂದು ಹೇಳಿದರು.