ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ದಿಗ್ವಿಜಯ ಸಾಧಿಸಿದೆ.
ಈ ಮೂಲಕ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಪಾಲಿಕೆಯಲ್ಲಿ ಮತ್ತೊಮ್ಮೆ ತಮ್ಮ ಬಿಗು ಹಿಡಿತ ಸಾಧಿಸಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆಯಲ್ಲಿ ತನ್ನ ಪ್ರಭುತ್ವ ಸಾಧಿಸಿತು. ಈ ಮೂಲಕ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಕೈಯಿಂದ ಅಧಿಕಾರ ಪಡೆಯಬೇಕು ಎಂದುಕೊಂಡಿದ್ದ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಮರಾಠಿ ಭಾಷಿಕರಾದ ಮಂಗೇಶ ಪವಾರ್ 41ನೇ ವಾರ್ಡಿನ ಸದಸ್ಯರು. ಕನ್ನಡ ಭಾಷಿಕರಾದ ವಾಣಿ ಜೋಶಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.
ಎರಡೂ ವಾರ್ಡುಗಳು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಮಂಗೇಶ ಪವಾರ್,
ರಾಜು ಭಾತಖಾಂಡೆ, ಎಂಇಎಸ್ ನ ಬಸವರಾಜ ಮಾರುತಿ ಮೋದಗೇಕರ, ಎಐಎಂಐಎಂನ ಶಾಹಿದಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. ಬಳಿಕ ರಾಜು ಭಾತಖಾಂಡೆ ಹಾಗೂ ಶಾಹಿದಖಾನ್ ಪಠಾಣ ಉಮೇದುವಾರಿಕೆ ವಾಪಸ್ ಪಡೆದರು.
ಮಂಗೇಶ ಹಾಗೂ ಬಸವಾರಾಜ ಮಧ್ಯೆ ಚುನಾವಣೆ ನಡೆಯಿತು. ಮಂಗೇಶ ಪರವಾಗಿ 40 ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ತಟಸ್ಥವಾಗಿ ಇರುವ ಆಯ್ಕೆಗೆ ಯಾರೂ ಕೈ ಎತ್ತಲಿಲ್ಲ.
ಬಸವರಾಜ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಹೆಚ್ಚು ಮತ ಪಡೆದ ಮಂಗೇಶ ಅವರನ್ನು ಮೇಯರ್ ಎಂದು ಘೋಷಿಸಲಾಯಿತು.
ಉಪಮೇಯರ್ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ, ದೀಪಾಲಿ, ಖುರ್ಷಿದ್ ಮುಲ್ಲಾ, ಲಕ್ಷ್ಮೀ ಲೋಕರಿ ತಲಾ 2 ನಾಮಪತ್ರ ಸಲ್ಲಿದರು. ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದರು.
ಕಣದಲ್ಲಿ ಉಳಿದ ವಾಣಿ ವಿಲಾಸ ಜೋಶಿ ಪರವಾಗಿ 40 ವಿರೋಧವಾಗಿ 19 ಮತಗಳು ಬಂದವು.
ಲಕ್ಷ್ಮೀ ಲೋಕರಿ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಹೆಚ್ಚು ಮತ ಪಡೆದ ವಾಣಿ ಅವರನ್ನು ಉಪಮೇಯರ್ ಎಂದು ಘೋಷಿಸಲಾಯಿತು.
ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಶಾಸಕ ಆಸಿಫ್ ಸೇರ್, ಸಂಸದೆ ಪ್ರಯಾಂಕ ಜಾರಕಿಹೊಳಿ ಹಾಗೂ ಒಬ್ಬ ಪಾಲಿಕೆ ಸದಸ್ಯ ಗೈರು ಹಾಜರಾಗಿದ್ದರು.
65 ಮತದಾರ ಪೈಕಿ 60 ಮಂದಿ ಹಾಜರಿದ್ದರು.
ಗೋವಾವೇಸ್ ಬಳಿಯ ತಿನಿಸುಕಟ್ಟೆಯ ಮಳಿಗೆಗಳನ್ನು ತಮ್ಮ ಪತ್ನಿಯ ಹೆಸರಿನಲ್ಲಿ ಪಡೆದಿದ್ದಾರೆ ಎಂಬ ಕಾರಣಕ್ಕೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮಂಗೇಶ್ ಪವಾರ್ ಅವರ ಮಹಾನಗರ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಂಗೇಶ ಪವಾರ್ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಇದೀಗ ಅವರೇ ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿರುವುದು ವಿಶೇಷವಾಗಿದೆ.