ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಈ ವಾರ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 11 ಮತ್ತು 12 ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳು ಮತ್ತು ಕರಾವಳಿ ಪ್ರದೇಶದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಈ ಪ್ರದೇಶದ ಹವಾಮಾನದ ಮೇಲೆ ಪ್ರಭಾವ ಬೀರುತ್ತಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಕರಾವಳಿ ಭಾಗಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎರಡು ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಕಲಬುರಗಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ ಮತ್ತು ಕೊಪ್ಪಳ ಸೇರಿದಂತೆ ಪ್ರದೇಶಗಳಲ್ಲಿ ಹೆಚ್ಚಿನ ತಾಪಮಾನ ಮುಂದುವರಿಯಲಿದ್ದು, ತಕ್ಷಣ ಮಳೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ಐಎಂಡಿ ಮುನ್ಸೂಚನೆ ನೀಡಿದೆ.