ದುಬೈ : ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದೆ.
25 ವರ್ಷದ ನಂತರ ಸೇಡು ತೀರಿಸಿಕೊಂಡ ಭಾರತ…ದಾಂಡಿಯಾ ಆಡಿದ ಕೊಹ್ಲಿ-ರೋಹಿತ್ !…ನಾಯಕನ ಆಟವಾಡಿದ ರೋಹಿತ್ ಭರ್ಜರಿ 57 ನೇ ಅರ್ಧಶತಕ ಬಾರಿಸಿದರು. ಇದು ಫೈನಲ್ ಪಂದ್ಯದ ವಿಶೇಷ.
ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ಟೀಂ ಇಂಡಿಯಾ ತಂಡವು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ ಇನ್ನು 6 ಎಸೆತಗಳು ಬಾಕಿ ಇರುವಂತೆ 254 ರನ್ ಗಳಿಸಿ ಭರ್ಜರಿ ಜಯಗಳಿಸಿತು.
ಮೊದಲು ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (37 ರನ್) ಮತ್ತು ವಿಲ್ ಯಂಗ್ (15 ರನ್) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು.
ಆದರೆ ಈ ಹಂತದಲ್ಲಿ ದಾಳಿಗಿಳಿದ ಭಾರತ ತಂಡದ ಯಶಸ್ವಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ವಿಲ್ ಯಂಗ್ ರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ವಿಕೆಟ್ ತಂದಿತ್ತರು. ಬಳಿಕ 37 ರನ್ ಗಳಿಸಿದ್ದ ಅಪಾಯಕಾರಿ ಬ್ಯಾಟರ್ ರಚಿನ್ ರವೀಂದ್ರ ಅವರನ್ನು ಕುಲದೀಪ ಯಾದವ್ ಅವರು ತಮ್ಮ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಕೇನ್ ವಿಲಿಯಮ್ಸನ್ ಕೂಡ ಕುಲದೀಪ ಅವರಿಗೆ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕ್ರೀಸ್ ಗೆ ಬಂದ ಡರಿಲ್ ಮೆಚೆಲ್ ಕಿವೀಸ್ ತಂಡದ ಕುಸಿತವನ್ನು ತಡೆದರು. 101 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ ಸಹಿತ 63 ರನ್ ಗಳಿಸಿದರು. ಅವರಿಗೆ ಟಾಮ್ ಲಾಥಮ್ (14 ರನ್) ಮತ್ತು ಗ್ಲೆನ್ ಫಿಲಿಪ್ಸ್ (34 ರನ್) ಉತ್ತಮ ಸಾಥ್ ನೀಡಿದರು. ಬಳಿಕ ಕ್ರೀಸ್ ಗೆ ಬಂದ ಬ್ರೇಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕಿವೀಸ್ ತಂಡವು 250ರ ಗಡಿ ದಾಟಲು ಕಾರಣರಾದರು. ಬ್ರೇಸ್ ವೆಲ್ ಕೇವಲ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿದರು.
ನ್ಯೂಜಿಲೆಂಡ್ ತಂಡವು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251ರನ್ ಕಲೆಹಾಕಿ ಭಾರತಕ್ಕೆ 252ರನ್ ಗಳ ಗೆಲುವಿನ ಗುರಿ ನೀಡಿತು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಕುಲದೀಪಯಾದವ್ ತಲಾ 2 ವಿಕೆಟ್ ಪಡೆದರೆ, ಶಮಿ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ರೋಹಿತ್ ಶರ್ಮಾ 76, ಶುಭ್ಮನ್ ಗಿಲ್ 31, ವಿರಾಟ್ ಕೊಹ್ಲಿ 1, ಶ್ರೇಯಸ್ ಅಯ್ಯರ್ 48, ಅಕ್ಷರ್ ಪಟೇಲ್ 29, ಹಾರ್ದಿಕ್ ಪಾಂಡ್ಯ 18, ಕೆಎಲ್ ರಾಹುಲ್ ಅಜೇಯ 34 ಮತ್ತು ರವೀಂದ್ರ ಜಡೇಜಾ ಅಜೇಯ 9 ರನ್ ಪೇರಿಸಿದ್ದಾರೆ.
2000ನೇ ಇಸವಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈ ಸಲ ಭಾರತ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದೆ.