ದುಬೈ : ಇಲ್ಲಿ ರವಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ನಾಲ್ಕು ವಿಕೆಟ್ ಅಂತರದಿಂದ ಮಣಿಸಿದೆ. ಈ ಮೂಲಕ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಟ್ರೋಫಿಯನ್ನು ಈ ಬಾರಿ ತನ್ನದಾಗಿಸಿಕೊಂಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಈ ಮೂಲಕ ಭಾರತ ಎರಡನೇ ಸಲ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. 2013ರಲ್ಲೂ ಭಾರತ ಈ ಟ್ರೋಫಿ ಜಯಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಪೇರಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಓವರ್ ಬಾಕಿ ಇರುವಾಗಲೇ ಜಯ ಸಾಧಿಸಿತು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸಿತು. ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನೂ ಹೆಚ್ಚಿಸಿತ್ತು. ರೋಹಿತ್ ಶರ್ಮಾ ಅಬ್ಬರದ ಆರಂಭದ ನಡುವೆಯೂ ಭಾರತ ದಿಢೀರ್ ವಿಕೆಟ್ ಪತನ ಪಂದ್ಯದ ಗತಿ ಬದಲಿಸಿದ್ದು ಸುಳ್ಳಲ್ಲ. ಆದರೆ ಸತತ ಹೋರಾಟ ಟೀಂ ಇಂಡಿಯಾ ಕೈಹಿಡಿಯಿತು . ಆರಂಭದಲ್ಲಿ ರೋಹಿತ್, ಬಳಿಕ ಶ್ರೇಯಸ್ ಅಯ್ಯರ್, ಕೊನೆಯಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಗೆಲುವು ಖಚಿತಪಡಿಸಿದರು. ಭಾರತ 4 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಟ್ರೋಫಿ ಗೆದ್ದುಕೊಂಡಿದೆ. 2024ರಲ್ಲಿ ಐಸಿಸಿ ಟಿ20 ಟ್ರೋಫಿ ಗೆದ್ದಿದ್ದ ಭಾರತ ಇದೀಗ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಸತತ 2 ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ಭಾರತಕ್ಕೆ ನ್ಯೂಜಿಲೆಂಡ್ ಕೊಟ್ಟ ಟಾರ್ಗೆಟ್ 252 ರನ್. ಆದರೆ ನಾಯಕ ರೋಹಿತ್ ಶರ್ಮಾ ಆರಂಭ ನೋಡಿದರೆ ಈ ಟಾರ್ಗೆಟ್ ಅಲ್ಪವಾಯತು ಅನ್ನೋ ಮಟ್ಟಿಗೆ ಇತ್ತು. ಇತ್ತ ಶುಭಮನ್ ಗಿಲ್ ನಿಧಾನದ ಆಟಕ್ಕೆ ಒತ್ತು ನೀಡಿದರೆ, ರೋಹಿತ್ ಮಾತ್ರ ಅಬ್ಬರಿಸಿದರು. ಹೀಗಾಗಿ ಟೀಂ ಇಂಡಿಯಾ ಸ್ಫೋಟಕ ಆರಂಭ ಪಡೆಯಿತು. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಒತ್ತಡ ನಿಧಾನವಾಗಿ ಮರೆಯಾಗ ತೊಡಗಿತು. ರೋಹಿತ್ ಹಾಗೂ ಶುಭಮನ್ ಗಿಲ್ ಜೊತೆಯಾಟ ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿತು. ಈ ಜೋಡಿ 100 ರನ್ ಜೊತೆಯಾಟ ನೀಡಿತು.
ಭಾರತದ ರನ್ ವೇಗ ಪಡೆದುಕೊಳ್ಳುತ್ತಿದ್ದಂತೆ ನ್ಯೂಜಿಲೆಂಡ್ ಗೇಮ್ ಪ್ಲಾನ್ ಬದಲಿಸಿತು. ಸ್ಪಿನ್ ದಾಳಿ ಮೂಲಕ ಟೀಂ ಇಂಡಿಯಾ ಕಟ್ಟಿಹಾಕಲು ಮುಂದಾಗಿತ್ತು. ಅಲ್ಲಿಂದ ಟೀಂ ಇಂಡಿಯಾ ವಿಕೆಟ್ ಪತನವೂ ಆರಂಭಗೊಂಡಿತು. ಶುಭಮನ್ ಗಿಲ್ 31 ರನ್ ಸಿಡಿಸಿ ಔಟಾಗಿದ್ದರು. ಗಿಲ್ ವಿಕೆಟ್ ಪತನ ಯಾವುದೇ ಆತಂಕ ತಂದಿರಲಿಲ್ಲ. ಕಾರಣ ಗಿಲ್ 50 ಎಸೆತದಲ್ಲಿ 31 ರನ್ ಸಿಡಿಸಿದ್ದರು. ಹೀಗಾಗಿ ಅಭಿಮಾನಿಗಳು ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಕಾಯುತ್ತಿದ್ದರು. ಆದರೆ ಕೊಹ್ಲಿ ಬಂದ ರಭಸದಲ್ಲಿ ವಿಕೆಟ್ ಕೈಚೆಲ್ಲಿದರು. ಇದು ಆತಂಕ ಸೃಷ್ಟಿಸಿತ್ತು. ಕಾರಣ 105 ರನ್ಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತ್ತು. 106 ರನ್ಗೆ ಟೀಂ ಇಂಡಿಯಾ 2ನೇ ವಿಕೆಟ್ ಕಳೆದುಕೊಂಡಿತ್ತು.
ಕೋಹ್ಲಿ ವಿಕೆಟ್ ಪತನಗೊಂಡರೂ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಕೊಂಚ ಸಮಾಧಾನ ತಂದಿತ್ತು. ಆದರೆ ರೋಹಿತ್ ಶರ್ಮಾ 76 ರನ್ ಸಿಡಿಸಿ ಔಟಾದರು. ಭಾರತದ 3ನೇ ವಿಕೆಟ್ ಪತನ ತೀವ್ರ ಆತಂಕ ಸೃಷ್ಟಿಸಿತ್ತು. ನ್ಯೂಜಿಲೆಂಡ್ ಸ್ಪಿನ್ ದಾಳಿ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಹೋರಾಟ ಟೀಂ ಇಂಡಿಯಾಗೆ ಸಮಧಾನ ತಂದಿತ್ತು. ಅಕ್ಸರ್ ಹಾಗೂ ಶ್ರೇಯಸ್ ಇಬ್ಬರ ಬ್ಯಾಟಿಂಗ್ನಿಂದ ಟೀಂ ಇಂಡಿಯಾ ನಿಧಾನವಾಗಿ ಆಘಾತದಿಂದ ಚೇತರಿಸಿಕೊಳ್ಳಲು ಆರಂಭಿಸಿತು. ಜವಾಬ್ದಾರಿಗೆ ತಕ್ಕಂತೆ ಆಡಿದ ಶ್ರೇಯಸ್ ಅಯ್ಯರ್ 48 ರನ್ ಸಿಡಿಸಿ ಔಟಾದರು. ಇದು ಮತ್ತೆ ತಳಮಳ ಸೃಷ್ಟಿಸಿತ್ತು. ಇತ್ತ ಅಕ್ಸರ್ ಪಟೇಲ್ ಕೂಡ 29 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಚಿತ್ರಣ ಬದಲಾಯಿತು. ಎಸೆತಗಳು ಕಡಿಮೆಯಾಯಿತು. ರನ್ ಹೆಚ್ಚಾಯಿತು.