ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ರ ದಾಖಲೆಯ ಬಂಜೆಟ್ (State Budget) ಮಂಡಿಸಿದ್ದು, ದಾಖಲೆಯ 16ನೇ ಆಯವ್ಯಯ ಮಂಡಿಸಿದ್ದಾರೆ. ದೇಶದ ಬೆನ್ನೆಲಬು ರೈತರ ಪರವಾಗಿ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.
’ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು’ ಎಂದು ಅವರು ಕುಮಾರವ್ಯಾಸ ಅವರ ಪದ್ಯವನ್ನು ಈ ವೇಳೆ ಓದಿದ್ದಾರೆ.
ಅವರು ಬಜೆಟ್ನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮಕ್ಕೆ ₹428 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದು, ಈ ಯೋಜನೆಯಿಂದ ಸುಮಾರು 50 ಸಾವಿರ ರೈತರಿಗೆ ನೆರವು ಸಿಗಲಿದೆ.
ತೋಟಗಾರಿಕೆ ಅಭಿವೃದ್ಧಿ ಯೋಜನೆಗೆ ₹95 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿಗಾಗಿ ಜ್ಞಾನಕೋಶ ತೆರಯಲು ನಿರ್ಧರಿಸಲಾಗಿದೆ. ದೇಶಿ ತಳಿಗಳ ಬೀಜಕ್ಕಾಗಿ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ, ತೋಟಗಾರಿಕಾ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.
5000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಕೃಷಿ ಭಾಗ್ಯ ಯೋಜನೆ ಅಡಿ 12,000 ಕೃಷಿ ಹೊಂಡ ತೆರೆಯಲಾಗುವುದು. ಜೊತೆಗೆ ತಂತ್ರಜ್ಞಾನ ಹೆಚ್ಚಾದಂತೆ ರೈತರನ್ನು ಆಧುನೀಕರಣದತ್ತ ಕೊಂಡೊಯ್ಯಲು, ಡಿಜಿಟಲ್ ಕೃಷಿ ಸೇವೆಗಳ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.ಸುಮಾರು 1.81 ಲಕ್ಷ ರೈತರಿಗಾಗಿ ಹನಿ, ತುಂತುರು ನೀರಿನ ಘಟಕ ತೆರೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ₹440 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ತೊಗರಿ ಬೆಳೆಗೆ ನೂತನ ತಂತ್ರಜ್ಞಾನ ಅಳವಡಿಸಲು ₹88 ಕೋಟಿ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು, ಸರ್ಕಾರವು ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ, 10 ಹವಾಮಾನ ವಲಯಗಳಲ್ಲಿ ಕೃಷಿ ಇಲಾಖೆಯ ಅಧೀನದ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು.
ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂದಾಜು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರೂ. ಸಹಾಯಧನವನ್ನು ಒದಗಿಸಲಾಗುವುದು.
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ, ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ್ ಬೆಳೆಯನ್ನಾಗಿ ಬೆಳೆಯಲು ಪ್ರೋತ್ಸಾಹ, ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು 88 ಕೋಟಿ ರೂ. ಒದಗಿಸಲಾಗುವುದು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ
ಕೃಷಿ ಭಾಗ್ಯ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ 12,000, ಕೃಷಿ ಹೊಂಡಗಳ ನಿರ್ಮಾಣ
ಜಾಗತಿಕ ಮಟ್ಟದಲ್ಲಿ ಡಿಜಿಟಲ್, ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಕೆ, ಡಿಜಿಟಲ್ ಕೃಷಿ ಸೇವೆಗಳ ಕೇಂದ್ರವನ್ನು ಸ್ಥಾಪನೆ. ಈ ಕೇಂದ್ರವು ರೈತರಿಗೆ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳ ನೈಸರ್ಗಿಕ ವೈಪರೀತ್ಯಗಳ ಬದಲಾವಣೆಯಿಂದ ಹವಾಮಾನ ವಲಯಗಳನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚನೆ.
ಕರ್ನಾಟಕ ರಾಜ್ಯದ ಸಾಗುವಳಿ ಪ್ರದೇಶದ ಶೇ.64ರಷ್ಟು ಪ್ರದೇಶವು ಮಳೆಯಾಶ್ರಿತ, ಹೀಗಾಗಿ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರವನ್ನಾಗಿಸಲು ಹಾಗೂ ರೈತರ ಜೀವನೋಪಾಯವನ್ನು ಸುಧಾರಿಸಲು ʻಸಮಗ್ರ ಮಳೆಯಾಶ್ರಿತ ಕೃಷಿ ನೀತಿʼ ಅನುಷ್ಠಾನ.
ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಗುರಿ.
ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ
ರೈತರಿಗೆ ಮಣ್ಣು ಪರೀಕ್ಷೆ ಹಾಗೂ ರಸಗೊಬ್ಬರ, ಬಿತ್ತನೆ ಬೀಜ, ಔಷಧಿ, ಜೈವಿಕ ಗೊಬ್ಬರ ಇತ್ಯಾದಿಗಳ ಗುಣಮಟ್ಟ ಪರೀಕ್ಷಿಸಲು ಇಲಾಖೆಯಡಿ ಇರುವ 58 ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ.
ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಮಂಡ್ಯ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆ ಯೋಜನೆ ಜಾರಿ.
ಜೈವಿಕ ಕೃಷಿ ಪರಿಕರ ಸ್ಟಾರ್ಟ್-ಅಪ್ಗಳು (Agri Start-up) ಉತ್ಪಾದಿಸುವ ಜೈವಿಕ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂಕ್ತ ದರದಲ್ಲಿ ಮಾರಾಟ ಮಾಡಲು ಉತ್ತೇಜನ.
ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಕ್ರಮ.
ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸಲು 25 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ ತರಗತಿಗಳನ್ನು ಆರಂಭಿಸಲು ಕ್ರಮ.
ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು 20 ಕೋಟಿ ರೂ. ಮೊತ್ತದಲ್ಲಿ ʻಸಾವಯವ ಮತ್ತು ಸಿರಿಧಾನ್ಯಗಳ ಹಬ್ʼ ಸ್ಥಾಪನೆ
ವಿಜಯಪುರದ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ