ಬೆಳಗಾವಿ : ಕಾವ್ಯವು ಗದ್ಯಕ್ಕಿಂತ ಶಕ್ತಿಯುತವಾದುದು. ಅದರ ಪ್ರಭಾವ ಮನಸ್ಸಿನ ಮೇಲೆ ಅಗಾಧವಾಗಿರುತ್ತದೆ. ಕಾವ್ಯದಲ್ಲಿನ ಸತ್ವವು ಸಂವೇದನಾಶೀಲ ಬದುಕಿಗೆ ಆಸರೆಯಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಫೆ. 5ರಂದು ಪ್ರೊ. ಸಿ. ಪಿ. ರವಿಚಂದ್ರ ಅವರೊಂದಿಗೆ ಪೊಯೆಟ್ರಿ ಇನ್ ಫೋಕಸ್ ಎಂಬ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನೋಡುವ ಜಗತ್ತಿಗಿಂತ ಕಾವ್ಯದ ಜಗತ್ತು ಭಿನ್ನವಾಗಿದೆ. ನಮ್ಮೆಲ್ಲ ಏರಿಳಿತಗಳಿಗೆ ಕಾವ್ಯವು ಉತ್ತರವನ್ನು ಒದಗಿಸುತ್ತದೆ. ಬದುಕಿನ ಹೆಜ್ಜೆಯ ಮುಂಗಾಣ್ಕೆಯನ್ನು ನೀಡುತ್ತದೆ. ಭಾಷೆಯ ಮಡಿವಂತಿಕೆಯನ್ನು ಬಿಟ್ಟು ಎಲ್ಲಾ ಭಾಷೆಯ ಕಾವ್ಯ, ಸಾಹಿತ್ಯದ ಸಾರವನ್ನು ಹೀರಬೇಕು. ಕಾವ್ಯವು ಸಂವೇದನಾಶೀಲ ಜಗತ್ತಿನ ಸೃಷ್ಟಿಗಾಗಿ ತನ್ನನ್ನು ತೆರೆದುಕೊಳ್ಳಬೇಕು. ಆಗ ಅಂಥ ಕಾವ್ಯವು ಶಾಶ್ವತ ಸ್ಥಾನ ಪಡೆಯುತ್ತದೆ. ವಿದ್ಯಾರ್ಥಿಗಳು ವ್ಯವಹಾರದ ಚತುರರಾಗಬಾರದು, ವಿದ್ಯೆಯ ಚತುರರಾಗಬೇಕು ಎಂದು ಕಿವಿ ಮಾತು ಹೇಳಿದರು.
ರಾಚವಿ ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಮಾತನಾಡಿ, ಕಾವ್ಯವು ಮನುಷ್ಯನನ್ನು ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುತ್ತದೆ. ಮನುಷ್ಯ ಬದುಕಬೇಕೆಂಬ ಉದ್ದೇಶದಿಂದ ಕಾವ್ಯ ಬರೆದಾಗ ಕಾವ್ಯ ಬದುಕುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಸಿ. ಪಿ. ರವಿಚಂದ್ರ ಮಾತನಾಡಿ, ತಾನು ಕಾವ್ಯ ಜಗತ್ತಿಗೆ ಬಂದಿದ್ದು ನನ್ನ ಗುರುಗಳಾದ ಅನಂತ ರಾಮಯ್ಯ ಅವರಿಂದ. ಅದು ತರಗತಿಯಲ್ಲಿ ನಡೆದ ವಚನದ ಭಾಷಾಂತರದಿಂದ.
ಕಾವ್ಯವು ಒಂದು ಪ್ರಜ್ಞೆಯಿಂದ ಇನ್ನೊಂದು ಪ್ರಜ್ಞೆಯೆಡೆಗೆ ಸಾಗಿಸುತ್ತದೆ. ಕವಿಯಾದವನು ಭಾಷೆಯೊಳಗಿನ ಪ್ರಜ್ಞೆಯನ್ನು ಮರೆಯಬಾರದು. ಪಂಪನನ್ನು ಹಿಡಿದು ಕನ್ನಡದ ಅನೇಕ ಕವಿಗಳು ಸಂಸ್ಕೃತದ ಮೂಲಕ ಕನ್ನಡ ಜಗತ್ತನ್ನು ಪ್ರವೇಶಿಸಿದರೆ, ಕುಮಾರವ್ಯಾಸ ಮಾತ್ರ ಕನ್ನಡ ಜಗತ್ತಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವ ಪ್ರಯತ್ನ ಮಾಡಿದ. ಜಗತ್ತಿನ ಶ್ರೇಷ್ಠ ಕವಿಗಳೆಲ್ಲರೂ ಜನಸಾಮಾನ್ಯರ ಬದುಕಿನ ನೋಟವನ್ನು ಹೀರಿಕೊಂಡವರಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಂ. ಜಿ. ಹೆಗಡೆ ಅವರು ನಮ್ಮಲ್ಲಿನ ಅನುಭವದ ಬುತ್ತಿಯೇ ಕಾವ್ಯದ ಜೀವಾಳ. ಕಾವ್ಯ ಬದುಕಿಗೆ ಎಚ್ಚರಿಕೆಯನ್ನು ಕೊಡುತ್ತಾ, ಭರವಸೆಯನ್ನೂ ತುಂಬುತ್ತದೆ. ಕಾವ್ಯವು ಜೀವ ಪರವಿರಬೇಕು. ಪ್ರೊ. ಸಿ.ಪಿ. ರವಿಚಂದ್ರ ಅವರ ಕಾವ್ಯವು ಅಳಿದ ಮೇಲೆಯೂ ಜೀವ ಸೆಲೆಯದ ಕುರಿತು ಹೇಳುವುದರ ಜೊತೆಗೆ ಕಾಲದೊಂದಿಗೆ ಬದುಕು ನಿರಂತರವಾಗಿರುತ್ತದೆ ಎಂಬ ದರ್ಶನವನ್ನು ನೀಡುತ್ತದೆ ಎಂದರು.
ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಡಾ. ಗಿರಿಜಾಶಂಕರ ಮಾನೆ ರಚಿಸಿದ ದಲಿತ್ ರಿಫ್ಲೇಕ್ಷನ್ಸ್ ಇಂಗ್ಲಿಷ್ ಕವನ ಸಂಕಲನವನ್ನು ಬಿಡುಗಡೆ ಮಾಡಿದರು.
ವಿದ್ಯಾರ್ಥಿನಿ ಅನನ್ಯ ನಾಯಕ ಸ್ವಾಗತಿಸಿದರು, ಮೀರಾ ನದಾಫ್ ಮತ್ತು ಸಾನ್ವಿ ತೆರಣಿ ನಿರೂಪಿಸಿದರು, ಪ್ರಿಯಾಂಕಾ ತೆಲಗಾರ ಪ್ರಾರ್ಥಿಸಿದರು, ಅಫ್ರೋಜಾ ದೇಸಾಯಿ ಪರಿಚಯಿಸಿದರು, ಅನುಷಾ ಮಸ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.