ಮುಂಬೈ: ಪುಣೆಯ ಸ್ವಾರ್ಗೇಟ್ ಬಸ್ ಡಿಪೋದಲ್ಲಿ ನಿಂತಿದ್ದ ಬಸ್ನಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ ದತ್ತಾತ್ರಯ ರಾಮದಾಸ್ ಗಾಡೆ(36) ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಗಾಡೆಯನ್ನು ಶಿರೂರು ತಹಸಿಲ್ನಲ್ಲಿ ಗುರುವಾರ ಮಧ್ಯರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ,ಆತನನ್ನು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಸದ್ಯ, ವಿಚಾರಣೆ ನಡೆಸುತ್ತಿರುವ ಪೊಲೀಸರು, ಅಧಿಕೃತ ಬಂಧನಕ್ಕೊಳಪಡಿಸುವ ಮೊದಲು ಸಾಸೂನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಪುಣೆ ಜಿಲ್ಲೆಯ ಶಿರೂರು ತಹಸಿಲ್ನ ಗುಣತ್ ಗ್ರಾಮದ ಸಮೀಪದಲ್ಲಿ ಪುಣೆ ಸಿಟಿ ಪೊಲೀಸರು, ಪುಣೆ ಗ್ರಾಮಾಂತರ ಪೊಲೀಸರು ಮತ್ತು ಸಿಐಡಿ ಅಪರಾಧ ವಿಭಾಗದ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಆತನ ಪತ್ತೆಗೆ ಪುಣೆ ಪೊಲೀಸರು ಡೋನ್ಗಳು ಮತ್ತು ಶ್ವಾನದಳವನ್ನು ಗುಣತ್ ಗ್ರಾಮ ಮತ್ತು ಚಿಂಚ್ಚಿ ಅಣೆಕಟ್ಟಿನ ಹಿನ್ನೀರಿನ ಉದ್ದಕ್ಕೂ ನಿಯೋಜಿಸಿದ್ದರು. ಅಲ್ಲದೆ, ಆರೋಪಿ ಬಗ್ಗೆ ಸುಳಿವು ನೀಡುವವರಿಗೆ ರೂ. 1 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಸ್ಥಳೀಯ ಗ್ರಾಮಸ್ಥರು ಆರೋಪಿಯನ್ನು ಹಿಡಿಯಲು ಪೊಲೀಸ್ ತಂಡಕ್ಕೆ ಸಹಾಯ ಮಾಡಿದ್ದಾರೆ.
ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನ ಸೇರಿ ಅರ್ಧ ಡಜನ್ ಪ್ರಕರಣಗಳು ಈತನ ಮೇಲಿವೆ. 2019ರಿಂದ ಜಾಮೀನಿನ ಮೇಲೆ ಹೊರಗಿರುವ ಈತ ಈಗ ಅತ್ಯಾಚಾರ ಎಸಗಿದ್ದಾನೆ.
ಬುಧವಾರ ಪುಣೆಯ ಸ್ವಾರ್ಗೇಟ್ ಡಿಪೋದಲ್ಲಿ ನಿಂತಿದ್ದ ಬಸ್ನಲ್ಲಿ ಈತ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬುಧವಾರ ಬೆಳಗಿನ ಜಾವ 5.30ರ ಸುಮಾರಿಗೆ ಘಟನೆ ನಡೆದಿದೆ.
ಸಂತ್ರಸ್ತೆಯು ಪುಣೆಯಿಂದ ಸತಾರಾ ಜಿಲ್ಲೆಯ ಫಾಲ್ತಾನ್ಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದರು. ಮಹಿಳೆಯ ಬಳಿಗೆ ಬಂದ ವ್ಯಕ್ತಿ ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ ಎಂದು ಹೇಳಿದ್ದಾನೆ.
ನಂತರ ಮಹಿಳೆಯನ್ನು ವಿಸ್ತಾರವಾದ ನಿಲ್ದಾಣದ ಆವರಣದಲ್ಲಿ ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ
ಖಾಲಿ ಬಸ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.