ರಾಮದುರ್ಗ: ಮುಳ್ಳೂರು ಬೆಟ್ಟದ ಶಿವನಮೂರ್ತಿ ಆವರಣದಲ್ಲಿ ಮೂರ್ತಿ ಸ್ಥಾಪನೆಯಾದ 8 ನೇ ವರ್ಷದ ಮಹಾಶಿವರಾತ್ರಿ ಉತ್ಸವವನ್ನು ಫೆ. 26 ರಂದು ವಿಶೇಷವಾಗಿ ಆಚರಣೆ ಮಾಡಲು ಶಿವಪ್ರತಿಷ್ಠಾನ ಸೇವಾ ಸಮಿತಿ ಮುಂದಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಸಮಿತಿ ಮಾಡಿಕೊಳ್ಳುತ್ತಿದೆ.
ಮಹಾಶಿವರಾತ್ರಿ ಉತ್ಸವದ ದಿನ ರಾಜ್ಯದ ಎರಡನೇ ಎತ್ತರದ ಶಿವನ ಮೂರ್ತಿ ಮತ್ತು ನಂದಿ ವಿಗ್ರಹಗಳ ದರ್ಶನಕ್ಕೆ ಸುಮಾರು ಲಕ್ಷಕ್ಕೂ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ಅವರಿಗೆ ದರ್ಶನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಯಾವುದೇ ರಸ್ತೆಯಿಂದ ಸಾಗಿದರೂ ದೂರದ ಹಸಿರು ಬೆಟ್ಟದಲ್ಲಿ ಶಿವನ ಮೂರ್ತಿ ನೋಡುವುದೇ ಒಂದು ಸೌಭಾಗ್ಯ. ಸುತ್ತಲೂ ಹಸಿರು ಗಿಡಗಳು ಪ್ರಾಕೃತಿಕ ಸೌಂದರ್ಯ ಹೊಂದಿದ ತಾಣದಲ್ಲಿ ಫೆ. 26ರಂದು ಸಂಭ್ರಮ ಮನೆ ಮಾಡಲಿದೆ.
ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಉಪವಾಸ ಕೈಗೊಳ್ಳುವ ಮತ್ತು ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಉಪವಾಸದ ಫಲಹಾರದ ವ್ಯವಸ್ಥೆಗೆ ಸಮಿತಿ ಮುಂದಾಗಿದೆ. ಅದಕ್ಕಾಗಿ ಸುಮಾರು 3 ಟನ್ ಕರ್ಜೂರ, 3 ಕ್ವಿಂಟಾಲ್ ಬೇಯಿಸಿದ ಶೇಂಗಾ, ಒಂದು ಲಕ್ಷಕ್ಕೂ ಹೆಚ್ಚಿನ ಬಾಳೆ ಹಣ್ಣುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ನಿರ್ಧರಿಸಲಾಗಿದೆ.
ಪ್ರಸಾದ ಮತ್ತು ದರ್ಶನಕ್ಕಾಗಿ ನೂಕುನುಗ್ಗಲು ಎದುರಾಗದಂತೆ ಬ್ಯಾರಿಕೇಡ್ಗಳನ್ನು ಅಳವಡಿಸಿ ಹೆಚ್ಚಿನ ಕೌಂಟರ್ಗಳನ್ನು ನಿರ್ಮಿಸಲಾಗಿದೆ. ಪವಿತ್ರ ಮಹಾಶಿವರಾತ್ರಿ ಆಚರಣೆಗೆ ರಾತ್ರಿ ಜಾಗರಣೆ ಹಮ್ಮಿಕೊಂಡು ಆಧ್ಯಾತ್ಮ ಪ್ರವಚನಗಳು ನಡೆಯಲಿವೆ. ಭರ್ಜರಿ ಪೆಂಟಾಲ್ ನಿರ್ಮಿಲಾಗಿದೆ. ಪ್ರವಚನಕ್ಕೆ ಆಗಮಿಸುವ ಭಕ್ತರಿಗೂ ರಾತ್ರಿ ಸಹ ಶೇಂಗಾ, ಸಾಬೂದಾನಿ, ಕರ್ಜೂರ, ಬಾಳೆಹಣ್ಣಿನ ವಿತರಣೆ ಮಾಡಲಾಗುವುದು. ಮರುದಿನ ಭಕ್ತರಿಗೆ ಸಿಹಿ ಹುಗ್ಗಿ, ಅನ್ನ,
ಸಾರು ಪ್ರಸಾದವಾಗಿ ನೀಡಲಾಗುವುದು.
ಅಧ್ಯಾತ್ಮ ಪ್ರವಚನ ಮತ್ತು ಸಂಗೀತ ಸೇವೆ ಸಲ್ಲಿಸಲು ವಿವಿಧ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ಶಿವನ ಮೂರ್ತಿ ಸ್ಥಾಪಿಸಲಾಗಿದೆ. ಮೂರ್ತಿ ಸುತ್ತಲಿನ ಸುಮಾರು 32 ಎಕರೇ ಗುಡ್ಡದ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಶಾಸಕ ಅಶೋಕ ಪಟ್ಟಣ ಅವರು ಶ್ರಮಿಸುತ್ತಿದ್ದಾರೆ.
ಶಿವನ ಮೂರ್ತಿ ಮುಂದಿನ ನಂದಿ ವಿಗ್ರಹವನ್ನು ರಾಜ್ಯಕ್ಕೆ ಅತೀ ಹೆಚ್ಚಿನ ಎತ್ತರ (22 ಅಡಿ) ನಿರ್ಮಾಣ ಮಾಡಿ ಆಕರ್ಷಣೆ ಮಾಡಲಾಗಿದೆ. ಪಕ್ಕದಲ್ಲಿ ಮಕ್ಕಳ ಮನರಂಜನೆಗಾಗಿ ಉದ್ಯಾನ ಮಾಡಿ ವಿವಿಧ ಸಲಕರಣೆಗಳನ್ನು ಜೋಡಿಸಿದ್ದಾರೆ.
ಈ ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸುವುದು, ಹೂದೋಟ ನಿರ್ಮಿಸುವುದು, ವಾಯು ವಿಹಾರಕ್ಕೆ ಆಗಮಿಸುವವರಿಗೆ ಧಣಿವಾರಿಸಿಕೊಳ್ಳಲು ಆಸನದ ವ್ಯವಸ್ಥೆಗೆ ರಾಜ್ಯ ಸರ್ಕಾರ ಈಗಾಗಲೇ ರೂ. 40 ಲಕ್ಷ ಬಿಡುಗಡೆ ಮಾಡಿದೆ.
ಶಿವನಮೂರ್ತಿ ಸುತ್ತಲ ಪ್ರದೇಶದಲ್ಲಿ ರಾತ್ರಿ ಹೊತ್ತಿನಲ್ಲಿಯೂ ಉದ್ಯಾನವನದಲ್ಲಿ ಆಕರ್ಷಕ ದೀಪಾಲಂಕಾರದ ವ್ಯವಸ್ಥೆಗೆ ಚಿಂತನೆ ನಡೆದಿದೆ.
ಗುಡ್ಡದ ಪ್ರದೇಶದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಭಯದ ವಾತವಾರಣ ಇದ್ದು, ಈ ಪ್ರದೇಶದಲ್ಲಿ ನಿತ್ಯವೂ ಜನರು ಸಂಚರಿಸುವಂತಹ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಗತ್ಯ ಪೂರೈಕೆಗೆ ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.