ದುಬೈ : ಹೈ-ವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಸೋಲನುಭವಿಸಿದ ನಂತರ ತಂಡದ ಅಭಿಮಾನಿಗಳು ಮತ್ತು ಮಾಧ್ಯಮಗಳು ಸೇರಿದಂತೆ ಬೆಂಬಲಿಗರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವೈರಲ್ ಆಗಿರುವ ಪಾಕಿಸ್ತಾನಿ ಟಿವಿ ಚರ್ಚೆಯ ವಿಲಕ್ಷಣ ಹಾಗೂ ಹಾಸ್ಯಾಸ್ಪದ ಆರೋಪಗಳನ್ನೂ ಮಾಡಲಾಗಿದೆ. ಟಿವಿ ಚರ್ಚೆ ವೇಳೆ ಪ್ಯಾನೆಲಿಸ್ಟ್ಗಳಲ್ಲಿ ಒಬ್ಬರು ಭಾರತವು 22 ಪಂಡಿತರನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ “ಬ್ಲ್ಯಾಕ್ ಮ್ಯಾಜಿಕ್” ಮಾಡಲು ಕಳುಹಿಸಿತ್ತು ಎಂದು ಹೇಳಿದ್ದಾರೆ. ಈ ಬ್ಲ್ಯಾಕ್ ಮ್ಯಾಜಿಕ್” ಪಾಕಿಸ್ತಾನಿ ಆಟಗಾರರನ್ನು ತಬ್ಬಿಬ್ಬುಗೊಳಿಸಲು ಕಾರಣವಾಯಿತು ಎಂದು ಪಾಕಿಸ್ತಾನದ ಸೋಲಿನ ಬಗ್ಗೆ ಅಪಹಾಸ್ಯಕ್ಕೀಡಾಗುವ ಕಾರಣ ನೀಡಿದ್ದಾರೆ.
ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದ್ದು ಏಕೆಂದರೆ ಪಾಕಿಸ್ತಾನದಲ್ಲಿ ಆಡಿದರೆ ಭಾರತಕ್ಕೆ ಬ್ಲ್ಯಾಕ್ ಮಾಜಿಕ್ ಮಾಡುವ ಪಂಡಿತರನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿಯೇ ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿದೆ ಎಂದು ಮತ್ತೊಬ್ಬ ಪ್ಯಾನೆಲಿಸ್ಟ್ ಹೇಳಿದ್ದಾರೆ. ಬ್ಲ್ಯಾಕ್ ಮ್ಯಾಜಿಕ್ ಮಾಡುವ ಏಳು ಮಂದಿ ಪಂಡಿತರು ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಮೈದಾನಕ್ಕೆ ಭೇಟಿ ನೀಡಿದ್ದರು ಎಂದು ಟಿವಿ ಚರ್ಚೆ ವೇಳೆ ಆರೋಪಿಸಲಾಗಿದೆ.
ಪಾಕಿಸ್ತಾನದ ಮಾಧ್ಯಮಗಳು ಸೋಲಿಗೆ “ಬ್ಲಾಕ್-ಮ್ಯಾಜಿಕ್” ತಂತ್ರವನ್ನು ದೂಷಿಸುವುದು ಇದೇ ಮೊದಲಲ್ಲ. ಐಸಿಸಿ ವಿಶ್ವಕಪ್ 2023 ರ ಸಂದರ್ಭದಲ್ಲಿ, ಪಾಕಿಸ್ತಾನಿ ಪತ್ರಕರ್ತರೊಬ್ಬರು ಭಾರತವು ಪಂದ್ಯ ಗೆಲ್ಲುವಂತೆ ಮಾಡಲು ಬಿಸಿಸಿಐ ‘ಬ್ಲಾಕ್ ಮ್ಯಾಜಿಕ್’ ಸಹಾಯ ಪಡೆದುಕೊಂಡಿದೆ ಎಂದು ಆರೋಪಿಸಿದ್ದರು.
ಅಹಮದಾಬಾದ್ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅಂದಿನ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ತಾಂತ್ರಿಕರೊಬ್ಬರನ್ನು‘ಬ್ಲಾಕ್ ಮ್ಯಾಜಿಕ್’ ಮಾಡಲು ನೇಮಿಸಿದ್ದರು ಮತ್ತು ಇದು ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನದ ತಂಡದ ಸೋಲಿಗೆ ಕಾರಣವಾಯಿತು ಎಂದು ಪಾಕಿಸ್ತಾನಿ ಲೇಖಕ ಹರೀಂ ಶಾ ಆರೋಪಿಸಿದ್ದರು. ಆ ಪಂದ್ಯವನ್ನು ಭಾರತ 7 ವಿಕೆಟ್ಗಳಿಂದ ಗೆದ್ದಿತ್ತು.
“ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನಿ ತಂಡದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮಾಡಲು ಕಾರ್ತಿಕ್ ಚಕ್ರವರ್ತಿ ಎಂಬ ಮಾಟ ಮಾಡುವ ಪರಿಣಿತ ಮತ್ತು ತಾಂತ್ರಿಕರ ನೆರವನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು, ಏಕೆಂದರೆ ಇದು ಕೇವಲ ಸ್ವೀಕಾರಾರ್ಹವಲ್ಲ ಎಂದು ಷಾ ಎಕ್ಸ್ನಲ್ಲಿ ಹೇಳಿದ್ದರು.
ಈ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಹಾಸ್ಯಕ್ಕೆ ಕಾರಣವಾಗಿದೆ. ಪಾಕಿಸ್ತಾನ ನೀಡಿದ್ದ 241 ರನ್ಗಳ ಬೆನ್ನಟ್ಟಿದ ಭಾರತ ತಂಡವು ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್ ಗಳ ನೆರವಿನಿಂದ 42.3 ಓವರ್ಗಳಲ್ಲಿ ಗುರಿ ತಲುಪಿತು. ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಸೋಲಿನೊಂದಿಗೆ ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಹಂತದಲ್ಲಿಯೇ ಹೊರಬೀಳುವ ಅಂಚಿನಲ್ಲಿದೆ. ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ತಂಡದ ಅಭಿಯಾನವು ಬಹುತೇಕ ಮುಗಿದಿದೆ ಎಂದು ಒಪ್ಪಿಕೊಂಡಿದ್ದಾರೆ.