ಬೆಳಗಾವಿ: ಬಿ.ಕಾಂ. ವಿಷಯದ ಹಂಚಿಕೆ ಮತ್ತು ಬೋಧನೆಯಲ್ಲಿ ಉಂಟಾದ ಗೊಂದಲ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ವಿದ್ಯಾರ್ಥಿಗಳು ಬೆಂಬಲ ನೀಡಿದರು.
ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರಿಗೆ ವಿದ್ಯಾಸಂಗಮ ಆವರಣದಲ್ಲಿ ಮನವಿ ಸಲ್ಲಿಸಿದರು.
ಬಿ.ಕಾಂ ಪದವಿಯಲ್ಲಿ ಮೊದಲ ಸೆಮಿಸ್ಟರ್ ಬೋಧಿಸಲಾಗುವ ‘ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜಿನೆಸ್ ಡಿಸಿಜನ್’ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ಆದರೆ, ಈ ವಿಷಯ ವಾಣಿಜ್ಯ ಶಾಸ್ತ್ರ ಪ್ರಾಧ್ಯಪಕರು ಕಲಿಸುವುದು ಸೂಕ್ತ. ವಿಷಯವನ್ನು ಅರ್ಥಶಾಸ್ತ್ರ ಪ್ರಾಧ್ಯಾಪಕರಿಂದ ಬೋಧನೆ ಮಾಡಿಸುವ ಮೂಲಕ ವಾಣಿಜ್ಯ ಶಾಸ್ತ್ರ ಅಧ್ಯಾಪಕರಿಗೆ ಕೆಲಸ ದೊರೆಯುತ್ತಿಲ್ಲ ಮತ್ತು ಅನ್ಯಾಯವಾಗುತ್ತಿದೆ. ಆದ್ದರಿಂದ ಆರ್ಸಿಯು ವಾಣಿಜ್ಯ ಪದವಿ ವಿಷಯದಲ್ಲಿನ ಎಲ್ಲ ವಿಷಯಗಳನ್ನು ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಪಿ.ಎಲ್.ಹರಳೆ, ಉಪಾಧ್ಯಕ್ಷ ಡಿ.ವೈ.ಕಾಂಬ್ಳೆ, ಕಾರ್ಯದರ್ಶಿ ವಿಶ್ವನಾಥ ಮಾನೆ, ಪ್ರೊ.ಚಿದಾನಂದ ಶಿಂಗೆ, ವಿದ್ಯಾ ಜಿರಗೆ, ಅರುಣಾ ಸೂಜಿ, ಮಹಮ್ಮದ್ ನರ್ಕಾಚಿ ಭಾಗವಹಿಸಿದ್ದರು.