ಬೆಳಗಾವಿ: ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಸಂಚಾರಕ್ಕೆ ಅಡಚಣೆಯಾಯಿತು.
ದೇಸೂರಿನಿಂದ ಬೈಲಹೊಂಗಲದ ಕಡೆ ಹೊರಟಿದ್ದ ಟ್ಯಾಂಕರ್ ವೇಗವಾಗಿ ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಿಭಜಕಕ್ಕೆ ಡಿಕ್ಕಿ ಹೊಡೆದು, ಹೆದ್ದಾರಿಯ ಮತ್ತೊಂದು ಬದಿಗೆ ಹೋಗಿಬಿದ್ದಿದೆ. ಚಾಲಕನಿಗೆ ಗಂಭೀರ ಗಾಯವಾಗಿಲ್ಲ ಎಂದು ಹಿರೇಬಾಗೇವಾಡಿ ಪೊಲೀಸರು ತಿಳಿಸಿದ್ದಾರೆ.
ಈ ಹೆದ್ದಾರಿಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತವೆ. ಆದರೆ, ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ವಾಹನ ಪಲ್ಟಿಯಾದ ವೇಳೆ ಯಾವ ವಾಹನ ಬಾರದೇ ಇದ್ದರಿಂದ ಅನಾಹುತ ತಪ್ಪಿದೆ.
ಲಾರಿಯಾದ ಪಲ್ಟಿಯಾಗಿದ್ದರಿಂದ ಹೆದ್ದಾರಿಯಲ್ಲಿ ಸಾಕಷ್ಟು ಪ್ರಮಾಣದ ಪೆಟ್ರೋಲ್ ಬಿದ್ದಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಕ್ರೇನ್ ಮೂಲಕ ವಾಹನ ಮೇಲೆತ್ತಿದ್ದರು.