ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಕಾರ್ಯಕ್ರಮದ ಅಂಗವಾಗಿ ನೀಡುವ ಪ್ರತಿಷ್ಠಿತ ಮಹಿಳಾ ಗ್ರಂಥ ಬಹುಮಾನ 2023ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಮೂರು ಲೇಖಕಿಯರ ಸಂಕಲನಗಳನ್ನು ಆಯ್ಕೆ ಮಾಡಲಾಗಿದೆ.
ಉಡುಪಿಯ ಪೂರ್ಣಿಮಾ ಸುರೇಶ ಅವರ ರಂಗ ರಂಗೋಲಿ ಅಂಕಣ ಬರಹಗಳ ಸಂಕಲನ, ಬೆಳಗಾವಿಯ ಶ್ವೇತಾ ನರಗುಂದ ಅವರ ಆಯಾಮ ಕಥಾ ಸಂಕಲನ, ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕೆರೆ ದಡ ಕವನ ಸಂಕಲನಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ಬಹುಮಾನ ಆಯ್ಕೆಗಾಗಿ ಬಂದ ಲೇಖಕಿಯರ ವಿವಿಧ ಸಾಹಿತ್ಯ ಪ್ರಕಾರಗಳ 79 ಕೃತಿಗಳಲ್ಲಿ ಕಥೆ/ಕಾದಂಬರಿ, ಕವನ ಸಂಕಲನ ಹಾಗೂ ಇತರೆ ಪ್ರಕಾರಗಳು ಹೀಗೆ ಮೂರು ವಿಭಾಗದಲ್ಲಿ ಒಂದೊಂದು ಶ್ರೇಷ್ಠ ಕನ್ನಡ ಕೃತಿಗಳನ್ನು ನಿರ್ಣಾಯಕರ ಸಮಿತಿ ಆಯ್ಕೆ ಮಾಡಿದ್ದು, ಪ್ರತಿ ಬಹುಮಾನಿತ ಕೃತಿಗೆ 15,000 ರೂ.ಗಳನ್ನು ಬಹುಮಾನವಾಗಿ ನೀಡಿ ಪ್ರಶಸ್ತಿ ಫಲಕದೊಂದಿಗೆ ಲೇಖಕಿಯರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು 1977 ರಿಂದ ಅಂದರೆ 49 ವರ್ಷಗಳಿಂದ ಸಂಘವು ನೀಡುತ್ತಾ ಬಂದಿದ್ದು, ಮಹಿಳಾ ಸಾಹಿತ್ಯದ 3 ಪ್ರಕಾರಗಳಿಗೆ ಪ್ರಾಶಸ್ತ್ಯ ನೀಡಿದೆ.
ಪ್ರಸಕ್ತ ಬಹುಮಾನಗಳನ್ನು ಮಾರ್ಚ್ ಮೊದಲ ವಾರದಲ್ಲಿ ಸಂಘದಲ್ಲಿ ನೀಡಿ ಗೌರವಿಸಲಾಗುವುದು ಎಂದು ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.