ಬೆಳಗಾವಿ: ಅನಾಥರ, ವಿಕಲಾಂಗರ, ವೃದ್ಧರ, ರೋಗಿಗಳ ಸೇವೆಯನ್ನು ಮಾಡುವುದು ದೇವರ ಪೂಜೆಯಷ್ಟೇ ಶ್ರೇಷ್ಠ ಇಂತಹ ಮಹತ್ವದ ಸೇವೆಗೆ ಸಹಾಯಹಸ್ತ ನೀಡುತ್ತಿರುವ ಶಹಾಪುರದಲ್ಲಿರುವ ಶ್ರೀ ದಾನಮ್ಮದೇವಿ ಸಮಿತಿ ಪ್ರತಿವರ್ಷ ವಾರ್ಷಿಕೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿಸುತ್ತಿರುವುದು ಮೌಲಿಕವೆನಿಸಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಬೆಳಗಾವಿ ಶಹಾಪೂರದಲ್ಲಿ ಶ್ರೀ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 40ನೇ ವಾರ್ಷಿಕೋತ್ಸವ ಹಾಗೂ ಸಾಮಗ್ರಿ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಗುಡ್ಡಾಪುರದ ದಾನಮ್ಮ ಹನ್ನೆರಡನೆಯ ಶತಮಾನದ ಮಹಾಶರಣೆ. ತನ್ನ ಸಾಮಾಜಿಕ ಸೇವೆ ಹಾಗೂ ಉದಾರವಾದ ದಾನದಿಂದ ದಾನದಾಸೋಹಿ ಎಂಬ ಅಭಿನಾಮವನ್ನು ಬಸವಣ್ಣನವರಿಂದ ಪಡೆದವಳು. ದಾನಮ್ಮದೇವಿಯ ಸಾಮಾಜಿಕ ಸೇವೆ ಇಂದಿಗೂ ಬಸವಾನುಯಾಯಿಗಳಿಗೆ ದಾರಿದೀಪವೆನಿಸಿದೆ. ಸಮಾಜದಲ್ಲಿ ಹಣ ಅಂತಸ್ತು ಯಾವುದು ಶಾಶ್ವತವಾದುದಲ್ಲ. ನಾವು ಮಾಡುವ ಸೇವೆ ಅದು ಚಿರಂತನವಾದುದು. ನಿರಂಭಾವದಿಂದ ಸಮಾಜಕ್ಕೆ ಸಮರ್ಪಣೆ ಮಾಡಿ ಬದುಕಿಗೆ ಅರ್ಥವನ್ನು ಕಲ್ಪಿಸಬೇಕು. ದಾನಮ್ಮದೇವಿ ದಾಸೋಹಸೇವೆ ಅಂತಹದಾಗಿತ್ತು. ಅಂತಹ ದಾಸೋಹ ಪರಂಪರೆಯಲ್ಲಿ ನಡೆದಿರುವ ಶಹಾಪೂರದ ದಾನಮ್ಮದೇವಿ ಟ್ರಸ್ಟ್ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ಅಭಿಮಾನದ ಸಂಗತಿ ಅದು ಅನವರ ಮುನ್ನಡೆಯಲಿ ಎಂದು ಹಾರೈಸಿದರು.
ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ ದಾನಮ್ಮದೇವಿ ಟ್ರಸ್ಟ್ ನೊಂದವರ ಬೆಳಕಾಗಿ, ಅವರ ಮನಸ್ಸಿಗೆ ನೆಮ್ಮದಿಯ ಕಿರಣಗಳನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅನೇಕ ದಾನಿಗಳನ್ನು ಗುರುತಿಸಿ ಅವರಿಂದ ಸಮಾಜಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಹಣವಿದ್ದರೂ ಅದನ್ನು ನೀಡುವ ಮನವಿರಬೇಕು. ಅಂತಹ ಹೃದಯವಂತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಸದ್ದಿಲ್ಲದೇ ಸಮಾಜಸೇವೆಗೈಯುತ್ತಿದೆ. ಟ್ರಸ್ಟ್ ಸೇವೆಗೆ ಬೆಲೆಕಟ್ಟಲಾಗದು ಎಂದರು.
ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಯವರು ಮಾತನಾಡಿ ಗುಡ್ಡಾಪುರ ದಾನಮ್ಮದೇವಿ ಮಹಾಶರಣೆ ಅವಳ ದರ್ಶನವನ್ನು ದೂರದ ಮಹಾರಾಷ್ಟ್ರದ ಜತ್ತಿಗೆ ಹೋಗಿ ದರ್ಶನಭಾಗ್ಯ ಪಡೆಯುವುದು ಕಷ್ಟವೆಂದು ಅರಿತು, ನಮ್ಮ ಗುರುಗಳಾಗಿದ್ದ ಬಸವಲಿಂಗ ಮಹಾಸ್ವಾಮಿಗಳ ಮೂಲಕ ಇಲ್ಲಿಯ ಎಲ್ಲ ಭಕ್ತಾದಿಗಳು ಸ್ಥಳವನ್ನು ಪಡೆದು ಇದನ್ನು ದಾನಮ್ಮದೇವಿ ಪುಣ್ಯಕ್ಷೇತ್ರವನ್ನಾಗಿ ಮಾಡಿದ್ದಾರೆ. ಮಾತ್ರವಲ್ಲದೆ ದಾನಮ್ಮದೇವಿಯ ಆಶಯದಂತೆ ದಾನದಾಸೋಹದಲ್ಲಿ ತೊಡಗಿ ಅರ್ಥಪೂರ್ಣಗೊಳಿಸಿದ್ದಾರೆ. ಈ ಪುಣ್ಯಕರ್ಯ ನಿರಂತರವಾಗಿ ನಡೆಯಲೆಂದು ನುಡಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಎಸ್.ಬೆಂಬಳಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ.ಕಿತ್ತೂರ ವಂದಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಏಳು ಲಕ್ಷ ರೂ.ಗಳ ಅಗತ್ಯ ಸಾಮಗ್ರಿಗಳನ್ನು ಜಿಲ್ಲೆಯ ಬುದ್ಧಿಮಾಂದ್ಯ, ವೃದ್ಧಾಶ್ರಮ, ಅಂಗವಿಕಲ, ಪುನರ್ ವಸತಿ ಕೇಂದ್ರ, ಅನಾಥ ಮಕ್ಕಳ, ಎಚ್ಐವಿ ಮಕ್ಕಳ ವಿವಿಧ 30 ಸಂಘ ಸಂಸ್ಥೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಹಾಗೂ ವಿದ್ಯಾಭ್ಯಾಸಕ್ಕಾಗಿ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾಲೇಜು ಫೀಜುಗಳ ಚೆಕ್ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ತೆಲಸಂಗ, ವ್ಹಿ.ಸಿ.ಬೆಂಬಳಗಿ, ವಿಜಯಲಕ್ಷ್ಮೀ ಬೆಂಬಳಗಿ, ವಿವೇಕ ಭೋಜ ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ಹಾಗೂ ರೋಹಿಣಿ ಬೆಂಬಳಗಿ ನಿರೂಪಿಸಿದರು.