ನವದೆಹಲಿ: ಲೋಕಸಭೆಯ ಕಲಾಪಗಳನ್ನು ಆರ್ಎಸ್ಎಸ್ ಸಿದ್ಧಾಂತದ ಕಾರಣದಿಂದಾಗಿ ಸಂಸ್ಕೃತದಲ್ಲಿಯೂ ಅನುವಾದಿಸಿ ನೀಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಡಿಎಂಕೆ ಸದಸ್ಯ ದಯಾನಿಧಿ ಮಾರನ್ ಅವರು ಲೋಕಸಭೆಯಲ್ಲಿ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದರು.
ಮಾರನ್ ಮಾತಿಗೆ ತಿರುಗೇಟು ನೀಡಿದ ಸ್ಪೀಕರ್ ಓಂ ಬಿರ್ಲಾ ಅವರು, ಸಂಸ್ಕೃತವು ಈ ದೇಶದ ಪ್ರಧಾನ ಭಾಷೆ ಎಂದರು. ಲೋಕಸಭಾ ಕಲಾಪಗಳನ್ನು ಸಂಸ್ಕೃತ ಮಾತ್ರವಲ್ಲದೆ ದೇಶದಲ್ಲಿ ಮಾನ್ಯತೆ ನೀಡಲಾಗಿರುವ ಇತರ ಭಾಷೆಗಳಿಗೂ ಏಕಕಾಲದಲ್ಲಿ ಅನುವಾದಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಶೋತ್ತರ ಅವಧಿ ಪೂರ್ಣಗೊಂಡ ನಂತರ ಬಿರ್ಲಾ ಅವರು, ಸದನದ ಸದಸ್ಯರಿಗೆ ಹೆಚ್ಚುವರಿಯಾಗಿ ಆರು ಭಾಷೆಗಳಲ್ಲಿ ಕಲಾಪವನ್ನು ಏಕಕಾಲಕ್ಕೆ ಅನುವಾದಿಸುವ ವ್ಯವಸ್ಥೆ ಶುರುವಾಗಿದೆ ಎಂದು ತಿಳಿಸಿದರು. ಬೋಡೊ, ಡೊಗ್ರಿ, ಮೈಥಿಲಿ, ಮಣಿಪುರಿ, ಸಂಸ್ಕೃತ ಮತ್ತು ಉರ್ದು ಆ ಆರು ಭಾಷೆಗಳು ಎಂದರು.
ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೆ, ಅಸ್ಸಾಮಿ, ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಈ ಸೌಲಭ್ಯ ಇದೆ ಎಂದು ಬಿರ್ಲಾ ತಿಳಿಸಿದರು.
ಅಧಿಕೃತ ರಾಜ್ಯ ಭಾಷೆಗಳಲ್ಲಿ ಕಲಾಪವನ್ನು ಅನುವಾದಿಸಿ ಹೇಳುವ ವ್ಯವಸ್ಥೆಯನ್ನು ತಾವು ಸ್ವಾಗತಿಸುವುದಾಗಿಯೂ ಸಂಸ್ಕೃತವು ಸಂವಹನದಲ್ಲಿ ಬಳಕೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಸಂಸ್ಕೃತದಲ್ಲಿ ಅನುವಾದಿಸುವುದನ್ನು ವಿರೋಧಿಸುವುದಾಗಿಯೂ ಮಾರನ್ ಹೇಳಿದರು.
2011ರ ಜನಸಂಖ್ಯಾ ಸಮೀಕ್ಷೆಯನ್ನು ಉಲ್ಲೇಖಿಸಿ ಮಾರನ್ ಅವರು, ಸಂಸ್ಕೃತವನ್ನು 73 ಸಾವಿರ ಜನ ಮಾತ್ರ ಮಾತನಾಡುತ್ತಾರೆ ಎಂದರು. ‘ಆರ್ಎಸ್ಎಸ್ನ ಸಿದ್ಧಾಂತದ ಕಾರಣಕ್ಕೆ ಜನರ ತೆರಿಗೆ ಹಣವನ್ನು ಏಕೆ ವ್ಯರ್ಥ ಮಾಡಬೇಕು’ ಎಂದು ಪ್ರಶ್ನಿಸಿದರು.
ಮಾರನ್ ಮಾತಿಗೆ ಪ್ರತ್ಯುತ್ತರ ನೀಡಿದ ಬಿರ್ಲಾ, ‘ಇದು ಭಾರತ, ಸಂಸ್ಕೃತವು ಇಲ್ಲಿನ ಪ್ರಧಾನ ಭಾಷೆ. ನಾನು 22 ಭಾಷೆಗಳನ್ನು ಹೆಸರಿಸಿದ್ದೇನೆ. ಸಂಸ್ಕೃತವನ್ನು ಮಾತ್ರವೇ ಅಲ್ಲ. ನೀವು ಸಂಸ್ಕೃತಕ್ಕೆ ಆಕ್ಷೇಪ ವ್ಯಕ್ತಪಡಿಸುವುದೇಕೆ?
ಸಂಸತ್ತಿನಲ್ಲಿ 22 ಭಾಷೆಗಳಿಗೆ ಮಾನ್ಯತೆ ಇದೆ. ಹಿಂದಿಯಲ್ಲೂ ಸಂಸ್ಕೃತದಲ್ಲೂ ಏಕಕಾಲದಲ್ಲಿ ಅನುವಾದ ಆಗುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದರು.