ನವದೆಹಲಿ : 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯವನ್ನು ದಾಖಲಿಸಿದೆ. ಒಂದು ದಶಕಗಳ ಕಾಲ ದೆಹಲಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಕನಸು ನುಚ್ಚು ನೂರಾಗಿದೆ. ಅಂಕಿಅಂಶಗಳ ಪ್ರಕಾರ, 70 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ೪೮ ಸ್ಥಾನಗಳನ್ನು ಗೆದ್ದಿದೆ, ಆದರೆ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಕೇವಲ 22 ಸ್ಥಾನಗಳಲ್ಲಿ ಗೆಲುವು ಸಾಧಸಿದೆ. ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಬಿಜೆಪಿ 27 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ.
ಒಂದು ದಶಕದಿಂದ ದೆಹಲಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ ಎಎಪಿ ಎಡವಿದ್ದು ಎಲ್ಲಿ..? ಇಲ್ಲಿದೆ ಅದಕ್ಕೆ ಕಾರಣವಾದ 10 ಪ್ರಮುಖ ಅಂಶಗಳು.
ಸತತ 10 ವರ್ಷಗಳ ಅಧಿಕಾರಾವಧಿ
ಒಂದು ದಶಕದ ಕಾಲ ದೆಹಲಿಯನ್ನು ಆಳಿದ ನಂತರ, ಆಮ್ ಆದ್ಮಿ ಪಾರ್ಟಿ (AAP) ಪ್ರಬಲವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸಿತು. ಪಕ್ಷವು ತನ್ನ ಹಿಂದಿನ ಅವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣದಲ್ಲಿನ ತನ್ನ ಸಾಧನೆಗಳಿಗಾಗಿ ಪ್ರಶಂಸೆಯನ್ನು ಗಳಿಸಿದರೆ, ಸುಧಾರಿತ ಶುದ್ಧ ಗುಣಮಟ್ಟದ ವಾತಾವರಣದಂತಹ ಪ್ರಮುಖ ಭರವಸೆಗಳು ಈಡೇರದೇ ಇದ್ದುದು ಪ್ರಮುಖ ಸಮಸ್ಯೆಗಳಾಗಿವೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದೆ ಎಂಬ ಎಎಪಿಯ ಪುನರಾವರ್ತಿತ ಹೇಳಿಕೆಗಳು 10 ವರ್ಷಗಳ ಅಧಿಕಾರದ ನಂತರ ಮತದಾರರಲ್ಲಿಪ್ರಭಾವ ಬೀರಲು ವಿಫಲವಾದರು. “ಡಬಲ್ ಇಂಜಿನ್ ಆಡಳಿತ” – ಕೇಂದ್ರ ಮತ್ತು ರಾಜ್ಯಗಳ ನಡುವಿನ ತಡೆರಹಿತ ಸಮನ್ವಯ ಮೊದಲಾದ ಬಿಜೆಪಿಯ ಭರವಸೆ ಮತದಾರರಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಹಿರಿಯ ಎಎಪಿ ನಾಯಕರ ಬಂಧನ ಸೇರಿದಂತೆ ಆಂತರಿಕ ಪ್ರಕ್ಷುಬ್ಧತೆಯು ಪಕ್ಷದ ಸ್ಥಿತಿಯನ್ನು ಇನ್ನಷ್ಟು ದುರ್ಬಲಗೊಳಿಸಿತು.
.
“ಶೀಶ್ ಮಹಲ್” ವಿವಾದ -ಇದು ಮುಖ್ಯಮಂತ್ರಿ ನಿವಾಸದ ₹ 33.66 ಕೋಟಿ ವೆಚ್ಚದ ನವೀಕರಣವನ್ನು ಉಲ್ಲೇಖಿಸಿ ಭುಗಿಲೆದ್ದ ವಿವಾದವಾಗಿದೆ. ಕೇಜ್ರಿವಾಲ್ ಅವರ ಇಮೇಜ್ ಅನ್ನು ಇನ್ನಷ್ಟು ಹಾಳು ಮಾಡಿತು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಬಿಜೆಪಿ ಎತ್ತಿ ತೋರಿಸಿತು. ಇದು ನವೀಕರಣ ವೆಚ್ಚವು ಆರಂಭಿಕ ಅಂದಾಜಿನ ₹ 7.91 ಕೋಟಿಗಿಂತ ಬಹಳ ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿತು. ಕಾಂಗ್ರೆಸ್ ಸಹ ಈ ವಿಷಯದಲ್ಲಿ ಎಎಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿತು.
ನಾಯಕತ್ವದ ಬಿಕ್ಕಟ್ಟು
ಎಎಪಿ ಅಂದರೆ ಅರವಿಂದ ಕೇಜ್ರಿವಾಲ್ ಹಾಗೂ ಅರವಿಂದ ಕೇಜ್ರಿವಾಲ್ ಅಂದರೆ ಎಎಪಿ ಎಂದು ಜನಸಾಮಾನ್ಯರಲ್ಲಿ ಬಿಂಬಿತವಾಗಿದೆ. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಮಾರ್ಚ್ 2024 ರಲ್ಲಿ ಅವರ ಬಂಧನ ಮತ್ತು ಆನಂತರದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಾಯಕತ್ವದ ನಿರ್ವಾತವನ್ನು ಸೃಷ್ಟಿಸಿತು. ಅತಿಶಿ ಮುಖ್ಯಮಂತ್ರಿಯಾಗಿ ಆಗಿ ಅಧಿಕಾರ ವಹಿಸಿಕೊಂಡರೂ, ಕೇಜ್ರಿವಾಲ್ ರಾಜೀನಾಮೆ ಸುತ್ತಲಿನ ಸನ್ನಿವೇಶಗಳು ಪಕ್ಷದ ಇಮೇಜ್ ಮತ್ತು ಆಂತರಿಕ ಒಗ್ಗಟ್ಟನ್ನು ತೀವ್ರವಾಗಿ ಹಾನಿಗೊಳಿಸಿದವು.
ಕಾಂಗ್ರೆಸ್ ಜೊತೆ ಇಲ್ಲದ ಮೈತ್ರಿ
ಕಾಂಗ್ರೆಸ್ ಜೊತೆಗಿನ ಮೈತ್ರಿ ಇಲ್ಲದಿರುವುದು ಎಎಪಿಗೆ ದುಬಾರಿಯಾಯಿತು. ಹಿಂದಿನ ಚುನಾವಣೆಗಳಲ್ಲಿ ಎಎಪಿ ದೆಹಲಿಯಲ್ಲಿ ಕಾಂಗ್ರೆಸ್ ಅನ್ನು ಗಮನಾರ್ಹವಾಗಿ ದುರ್ಬಲಗೊಳಿಸಿತ್ತು, ಆದರೆ ಈ ಬಾರಿ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಆಕ್ರಮಣಕಾರಿ ಪ್ರಚಾರವನ್ನು ನಡೆಸಿತು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಎಎಪಿಯನ್ನು ಭ್ರಷ್ಟಾಚಾರ ಮತ್ತು ನೀಡಿದ್ದ ಭರವಸೆ ಈಡೇರಿಸದ ಕಾರಣಕ್ಕಾಗಿ ಟೀಕಿಸಿದರು, ಕಾಂಗ್ರೆಸ್ ಕೇಜ್ರಿವಾಲ್ ಸರ್ಕಾರದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಅಸಮಾಧಾನವನ್ನು ಬಂಡವಾಳ ಮಾಡಿಕೊಂಡಿತು.
ಮೂಲಸೌಕರ್ಯ ಹಾಗೂ ಅಭಿವೃದ್ಧಿಯ ಕೊರತೆ
ಮಹಿಳೆಯರಿಗೆ ಉಚಿತ ವಿದ್ಯುತ್ ಮತ್ತು ಬಸ್ ಪ್ರಯಾಣದಂತಹ ಕಲ್ಯಾಣ ಯೋಜನೆಗಳಿಂದ ಆರಂಭದಲ್ಲಿ ಎಎಪಿ ಸರ್ಕಾರ ಬೆಂಬಲ ಗಳಿಸಿದರೂ, ನಿರ್ಣಾಯಕ ಮೂಲಸೌಕರ್ಯದ ಕೊರತೆಯನ್ನು ಪರಿಹರಿಸುವಲ್ಲಿ ಎಎಪಿ ಸರ್ಕಾರದ ವೈಫಲ್ಯವು ವಿವಾದದ ಪ್ರಮುಖ ಅಂಶವಾಯಿತು.
ಹದಗೆಟ್ಟ ರಸ್ತೆಗಳು, ಮುಚ್ಚಿಹೋಗಿರುವ ಚರಂಡಿಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ಮುಂತಾದವುಗಳು ಮಧ್ಯಮ ವರ್ಗದ ಪ್ರದೇಶಗಳಲ್ಲಿ ಮತದಾರರನ್ನು ಕೆರಳಿಸಿತು, ವಿಶೇಷವಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD) ನಲ್ಲಿ ಅಧಿಕಾರದಲ್ಲಿದ್ದ ಎಎಪಿಗೆ ಸಮಸ್ಯೆಗಳ ಹೊಣೆಯನ್ನು ಬಿಜೆಪಿಯ ಮೇಲೆ ಹೊರಿಸಲು ಸಾಧ್ಯವಾಗಲಿಲ್ಲ.
ಬಿಜೆಪಿಯ ಕಾರ್ಯತಂತ್ರ
ಅರವಿಂದ ಕೇಜ್ರಿವಾಲ್ ಮತ್ತು ಅವರ ಆಡಳಿತವನ್ನು ಗುರಿಯಾಗಿಸಿಕೊಂಡು ಬಿಜೆಪಿ ತನ್ನ ಎಂದಿನ ಹಿಂದುತ್ವದ ಕಾರ್ಯಸೂಚಿಯಿಂದ ಬದಲಾಯಿಸಿಕೊಂಡು ಪಕ್ಷವು ಭ್ರಷ್ಟಾಚಾರ, ವಾಯು ಮಾಲಿನ್ಯ ಮತ್ತು ಟ್ರಾಫಿಕ್ನಂತಹ ಸಮಸ್ಯೆಗಳನ್ನು ಪ್ರಮುಖವಾಗಿ ಒತ್ತಿ ಹೇಳಿತು, ಅದೇ ಸಮಯದಲ್ಲಿ ಸ್ಥಳೀಯ ನಿವಾಸಿ ಕಲ್ಯಾಣ ಸಂಘಗಳೊಂದಿಗೆ ತೊಡಗಿಸಿಕೊಂಡಿದೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಉತ್ತೇಜಿಸುತ್ತದೆ.
ಎಎಪಿ (AAP) ಅನ್ನು ಗುರಿಯಾಗಿಸಿಕೊಂಡು ಮೀಮ್ಗಳನ್ನು ಒಳಗೊಂಡ ಬಿಜೆಪಿಯ ಡಿಜಿಟಲ್ ಪ್ರಚಾರವು ಅದರ ಸಂದೇಶವನ್ನು ಇನ್ನಷ್ಟು ಪ್ರಭಾವಶಾಲಿಯಾಗಿಸಿತು.
ಬಿಜೆಪಿಯ ಸುಪ್ತ ವೋಟ್ ಬ್ಯಾಂಕ್
ದೆಹಲಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಥಿರ ಪ್ರಾಬಲ್ಯವು ಅದರ ವಿಧಾನಸಭಾ ಪ್ರಚಾರಕ್ಕೆ ಬಲವಾದ ಅಡಿಪಾಯವನ್ನು ಒದಗಿಸಿತು. ಪಕ್ಷವು ತನ್ನ ಸುಪ್ತ ಮತದಾರರ ನೆಲೆಯನ್ನು ಯಶಸ್ವಿಯಾಗಿ ಗಟ್ಟಿಗೊಳಿಸಿಕೊಂಡಿತು, ಈ ಸುಪ್ತ ಮತ ಬ್ಯಾಂಕ್ ರಾಷ್ಟ್ರೀಯ ಚುನಾವಣೆಗಳಲ್ಲಿ ನಿಷ್ಠೆಯಿಂದ ಮತ ಚಲಾಯಿಸುತ್ತಿತ್ತು, ಆದರೆ ವಿದಾನಸಭೆ ಚುನಾವಣೆಗಳಲ್ಲಿ ಈ ಮತ ಬ್ಯಾಂಕ್ ಕಡಿಮೆ ಸಕ್ರಿಯವಾಗಿತ್ತು. ಆದರೆ ಈ ಬಾರಿ ಬಿಜೆಪಿ ಇದನ್ನು ಪರಿಣಾಮಕಾರಿಯಾಗಿ ಸಕ್ರಿಯಗೊಳಿಸಿತು.
ಹೊಸದಿಲ್ಲಿ ಕ್ಷೇತ್ರದಲ್ಲಿ ಪರ್ವೇಶ ವರ್ಮಾ ಅವರಂತಹ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜಾಟ್ ಸಮುದಾಯ ಸೇರಿದಂತೆ ಪ್ರಮುಖ ಸಮುದಾಯಗಳ ಬೆಂಬಲವನ್ನು ಪಡೆಯಲು ಬಿಜೆಪಿಗೆ ಸಹಾಯ ಮಾಡಿತು.
ಪುರಸಭೆಯ ದುರಾಡಳಿತ
2022 ರ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD) ಚುನಾವಣೆಗಳಲ್ಲಿ ಎಎಪಿ (AAP) ಗೆಲುವು ಅದಕ್ಕೆ ಒಂದು ಹೊಣೆಗಾರಿಕೆಯಾಗಿ ಮಾರ್ಪಟ್ಟಿತು. ದೆಹಲಿ ನಗರದಲ್ಲಿ ತುಂಬಿ ತುಳುಕುತ್ತಿರುವ ಕಸ, ಕಳಪೆ ರಸ್ತೆಗಳು ಮತ್ತು ಅನಿಯಮಿತ ನೀರು ಪೂರೈಕೆ ಸೇರಿದಂತೆ ದೆಹಲಿಯಲ್ಲಿ ಹದಗೆಟ್ಟಿರುವ ನಾಗರಿಕ ಮೂಲಸೌಕರ್ಯಗಳಿಗೆ ಮತದಾರರು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ನಲ್ಲಿ ಆಡಳಿತದಲ್ಲಿರುವ ಎಎಪಿ ಪಕ್ಷವನ್ನು ಹೊಣೆಗಾರರನ್ನಾಗಿಸಿದರು.
ಹಣಕಾಸಿನ ನಿರ್ಧಾರಗಳನ್ನು ನಿಯಂತ್ರಿಸುವ ಎಂಸಿಡಿಯಲ್ಲಿ ಸ್ಥಾಯಿ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದ್ದು, ಸುಗಮ ಆಡಳಿತಕ್ಕೆ ಮತ್ತಷ್ಟು ಅಡ್ಡಿಯಾಯಿತು. ಹತಾಶೆಗೊಂಡ ಕೌನ್ಸಿಲರ್ಗಳು ಮತ್ತು ಈಡೇರದ ಭರವಸೆಗಳು ಮತದಾರರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು.
ಹಿರಿಯ ನಾಯಕರ ನಿರ್ಗಮನ
ವರ್ಷಗಳಲ್ಲಿ, ಪ್ರಶಾಂತ ಭೂಷಣ, ಯೋಗೇಂದ್ರ ಯಾದವ್ ಮತ್ತು ಕುಮಾರ ವಿಶ್ವಾಸ ಸೇರಿದಂತೆ ಹಲವಾರು ಪ್ರಮುಖ ಎಎಪಿ ನಾಯಕರು ಕೇಜ್ರಿವಾಲ ಅವರ ನಿರಂಕುಶ ನಾಯಕತ್ವ ಶೈಲಿಯನ್ನು ಟೀಕಿಸಿ ಪಕ್ಷವನ್ನು ತೊರೆದರು.
ಆದರೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಆಡಳಿತದ ಬದಲು ರಾಜಕಾರಣದ ಮೇಲೆ ಪಕ್ಷದ ಗಮನವನ್ನು ಟೀಕಿಸಿದ ಹಿರಿಯ ನಾಯಕ ಕೈಲಾಶ ಗಹ್ಲೋಟ್ ಅವರ ರಾಜೀನಾಮೆಯು ಆಂತರಿಕ ಭಿನ್ನಾಭಿಪ್ರಾಯ ಹೊರಬೀಳಲು ಕಾರಣವಾಯಿತು. ಇದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸಲು ವಿಪಕ್ಷಗಳಿಗೆ ಮತ್ತಷ್ಟು ಅವಕಾಶ ನೀಡಿತು.
ನಕಾರಾತ್ಮಕ ಪ್ರಚಾರ
ಯಮುನಾ ನದಿಯನ್ನು ಕಲುಷಿತಗೊಳಿಸಲು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ವಿಷ ಬೆರಸುತ್ತಿದೆ ಎಂಬ ದೂಷಣೆ ಸೇರಿದಂತೆ ಎಎಪಿಯ ನಕಾರಾತ್ಮಕ ಪ್ರಚಾರಗಳು ಮತದಾರರ ಮೇಲೆ ಯಾವುದೇ ಪ್ರಬಾವ ಬೀರದೇ ಹೋದವು. ಈ ಆರೋಪ ಚುನಾವNಅ ಆಯೋಗದ ಕೆಂಗಣ್ಣಿಗೂ ಗುರಿಯಾಯಿತು. ಜೊತೆಗೆ ಪಕ್ಷದ ಗಂಭೀರ ನಡೆಗಳ ಮೇಲೆ ಪ್ರಶ್ನೆಗಳು ಮೂಡುವಂತೆ ಮಾಡಿದವು.
ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಚುನಾವಣಾ ಆಯೋಗದ ಮೇಲೆ ಪದೇ ಪದೇ ಅನಗತ್ಯ ವಾಗ್ದಾಳಿಗಳು ಎಎಪಿಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಿತು.
ಎಎಪಿಯ ಸೋಲು ದೆಹಲಿ ರಾಜಕೀಯದಲ್ಲಿ ಒಂದು ಮಹತ್ವದ ತಿರುವನ್ನು ಸೂಚಿಸುತ್ತದೆ, ಬಿಜೆಪಿಯು ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಈ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳುವ ಮತ್ತು ಭರವಸೆಗಳನ್ನು ಈಡೇರಿಸುವ ಬಗೆಗಿನ ಸವಾಲುಗಳ ಗಂಭೀರವಾದ ಜ್ಞಾಪನೆಯಾಗಿದೆ.