ನವದೆಹಲಿ : ದೆಹಲಿ ವಿದಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ. ಇದೇ ಟ್ರೆಂಡ್ ಮುಂದುವರಿದರೆ ಒಂದು ದಶಕದಿಂದ ಪ್ರಾಬಲ್ಯ ಹೊಂದಿದ್ದ ದೆಹಲಿಯ ರಾಜಕೀಯ ಭೂದೃಶ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ.
ಮತ ಎಣಿಕೆ ನಡೆಯುತ್ತಿದ್ದು, 27 ವರ್ಷಗಳ ನಂತರ ಬಿಜೆಪಿ ತನ್ನ ಮುನ್ನಡೆ ಸಾಧಿಸಿದ್ದು, ದೆಹಲಿಯಲ್ಲಿ ಸರ್ಕಾರ ರಚಿಸಬಹುದೇ ಎಂಬುದನ್ನು ಅಂತಿಮ ಫಲಿತಾಂಶಗಳು ನಿರ್ಧರಿಸಲಿವೆ.
ಈ ವರದಿ ಬರೆಯುವ ವೇಳೆಗೆ ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಎಪಿ-22 ಮತ್ತು ಕಾಂಗ್ರೆಸ್ 1 ಸ್ಥಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
27 ವರ್ಷಗಳ ನಂತರ ರಾಜಧಾನಿಯನ್ನು ಮರಳಿ ಪಡೆಯಲು ಬಿಜೆಪಿ ದೃಢ ಪ್ರಯತ್ನ ನಡೆಸುತ್ತಿದೆ. 2013ರವರೆಗೆ 15 ವರ್ಷಗಳ ಕಾಲ ದೆಹಲಿಯನ್ನು ಆಳಿದ್ದ ಕಾಂಗ್ರೆಸ್, ಕಳೆದ ಎರಡು ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿತ್ತು. ಆದರೆ ಈ ಬಾರಿ ಅದು ಕಳೆದ ಬಾರಿಗಿಂತ ಉತ್ತಮ ನಿರ್ವಹಣೆ ತೋರುವ ಸಾಧ್ಯತೆ ಕಂಡುಬರುತ್ತಿದೆ.
ಪ್ರಮುಖ ಆಪ್ ಅಭ್ಯರ್ಥಿಗಳಿಗೆ ಹಿನ್ನಡೆ
ಆರಂಭಿಕ ಟ್ರೆಂಡ್ಗಳಲ್ಲಿ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹಿನ್ನಡೆಯಲ್ಲಿದ್ದಾರೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮುನ್ನಡೆ ಸಾಧಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಕಾಜಿ ಕ್ಷೇತ್ರದಿಂದ ಹಿನ್ನಡೆ ಅನುಭವಿಸಿದ್ದಾರೆ. ಅವರ ವಿರುದ್ಧ ಬಿಜೆಪಿ ರಮೇಶ ಬಿದುರಿಯಾ ಮುನ್ನಡೆ ಸಾಧಿಸಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ಜಂಗ್ಪುರ ಕ್ಷೇತ್ರದಿಂದ ಹಿಂದೆ ಬಿದ್ದಿದ್ದಾರೆ.
ಆರ್ ಕೆ ಪುರಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲಕುಮಾರ ಶರ್ಮಾ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ನಾಯಕ ಓಂ ಪ್ರಕಾಶ್ ಶರ್ಮಾ ಆರಂಭಿಕ ಟ್ರೆಂಡ್ಗಳಲ್ಲಿ ವಿಶ್ವಾಸ್ ನಗರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಸಂಜಯ ಗೋಯಲ್ ಅವರು ಮುನ್ನಡೆ ಸಾಧಿಸಿದ್ದಾರೆ.
ರೋಹಿಣಿಯಲ್ಲಿ ಬಿಜೆಪಿಯ ರವೀಂದರ ಗುಪ್ತಾ ಮುನ್ನಡೆ ಸಾಧಿಸಿದ್ದಾರೆ. ಎಎಪಿಯ ಅವಧ್ ಓಜಾ ಹಿಂದೆ ಬಿದ್ದಿದ್ದಾರೆ.
ಬಿಜೆಪಿಯ ಕರವಾಲ್ ನಗರ ಅಭ್ಯರ್ಥಿ ಕಪಿಲ್ ಮಿಶ್ರಾ ಮುನ್ನಡೆಯಲ್ಲಿದ್ದರೆ, ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಎಎಪಿಯ ಸೌರಭ ಭಾರದ್ವಾಜ್ ಮುಂದಿದ್ದಾರೆ.
1.55 ಕೋಟಿ ಅರ್ಹ ಮತದಾರರನ್ನು ಹೊಂದಿರುವ ದೆಹಲಿಯಲ್ಲಿ ಫೆಬ್ರವರಿ 5 ರಂದು ನಡೆದ ಚುನಾವಣೆಯಲ್ಲಿ ಶೇಕಡಾ 60.54 ರಷ್ಟು ಮತದಾನವಾಗಿದೆ.