ಬೆಳಗಾವಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಶಿಸ್ತು, ಶ್ರಮ, ಸಾಧನೆಯ ಮೂಲಕ ಈ ಸಮಾಜಕ್ಕೆ ಒಂದು ವಿಶೇಷ ಕೊಡುಗೆ ನೀಡುವ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಬೆಳಗಾವಿ ಲೋಕಾಯುಕ್ತ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ನಿರಂಜನ ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿ.ಎ. ಪ್ರೌಢಶಾಲೆಯಲ್ಲಿ ಗುರುವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಒಂದು ವಿಶೇಷವಾದ ಸಾಮರ್ಥ್ಯ ಇರುತ್ತದೆ. ಅದನ್ನು ಸಾಧಿಸಲು ಶಿಸ್ತು, ಶ್ರಮ, ನಿರಂತರ ಅಧ್ಯಯನ ಬೇಕಾಗುತ್ತದೆ. ಒಬ್ಬ ಕ್ರೀಡಾಪಟು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕಾಗಿ ಅಪಾರವಾದ ಸಾಧನೆಯೆಂಬ ತಪಸ್ಸು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಕನಸು ಸಾಕಾರಕ್ಕಾಗಿ ಈಗಿನಿಂದಲೇ ಉತ್ತಮ ವಿಚಾರ ಹಾಗೂ ಗುರಿ ಇಟ್ಟುಕೊಂಡು ಶ್ರೇಷ್ಠ ಪ್ರಜೆಯಾಗಿ ಬಾಳಬೇಕು ಎಂದು ತಿಳಿಸಿದರು.
ಶಿಕ್ಷಕರ ಒತ್ತಾಯಕ್ಕೋ, ತಂದೆ- ತಾಯಿಯರ ಕಷ್ಟದ ಮಾತುಗಳಿಗೋ, ಸಹಪಾಠಿಯ ಓದನ್ನು ನೋಡಿ ನಾನು ಅವನಂತೆ ಓದಬೇಕು ಎಂಬ ತಕ್ಷಣದ ಸೀಮಿತ ಪ್ರಚೋದಕ್ಕೋ ಒಳಗಾಗದೆ ಶಾಶ್ವತತೆಯ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ನಾವು ದೃಢವಾದ ಹೆಜ್ಜೆ ಇಡಬೇಕು. ಯಶಸ್ಸು ಎನ್ನುವುದು ಸಾಕಷ್ಟು ಶಿಸ್ತು ಮತ್ತು ಶ್ರದ್ಧೆಯನ್ನು ಬಯಸುತ್ತದೆ. ಅದಕ್ಕಾಗಿ ನಾವು ಸೀಮಿತ ಅವಧಿಯ ಪ್ರೇರಣೆ-ಪ್ರಚೋದಕ ಇಟ್ಟುಕೊಳ್ಳದೆ ಶಿಕ್ಷಣ, ಸಂಸ್ಕಾರ, ಪ್ರೇರಣೆ ಈ ಮೂರರ ಸಂಯೋಜನೆಯ ಮೂಲಕ ಶಿಸ್ತು ಬದ್ಧ ವ್ಯಕ್ತಿ ಎಂದು ತೋರಿಸಿ ಕೊಡಬೇಕು ಎಂದು ಅವರು ಹೇಳಿದರು.
ನನ್ನಲ್ಲಿ ಪ್ರತಿಕ್ಷಣವೂ ಜ್ಞಾನವನ್ನು ಪಡೆದುಕೊಳ್ಳುವ ಹಂಬಲವಿದೆ. ಇದನ್ನು ನಾನು ಮಾಡಬಲ್ಲೆ, ಸಾಧಿಸಬಲ್ಲೆ ಎಂಬ ಹುಮ್ಮಸ್ಸು ಇದ್ದರೆ ಅವರ ಜೀವನದಲ್ಲಿ ಸದಾಕಾಲವೂ ಸಂತೋಷದಿಂದ ಬಾಳಿ ಆತ್ಮವಿಶ್ವಾಸದಿಂದ ಬದುಕುವುದು ಸಾಧ್ಯ. ಇದರಿಂದ ನಾವು ಯಾವುದೇ ಹಂತಕ್ಕೆ ಬೇಕಾದರೂ ತಲುಪಬಹುದು. ಮಾನಸಿಕವಾಗಿ ಗಟ್ಟಿಯಾಗುವ ಜೊತೆಗೆ ಆರ್ಥಿಕವಾಗಿಯೂ ಸಬಲರಾಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಯಾವುದೇ ಸ್ನಾನಮಾನದಲ್ಲಿ ಇದ್ದರೂ ಅವರಲ್ಲಿ ಸೇವಾ ಭಾವ, ಸಮಾಜದೊಂದಿಗೆ ಬೆರೆಯುವ ಮನಸ್ಥಿತಿ ಬಹಳ ಮುಖ್ಯವಾಗುತ್ತದೆ. ನಾವು ಸಿನಿಮಾವನ್ನು ನೋಡುತ್ತೇವೆ. ಆದರೆ ಅದು ವಾಸ್ತವಿಕ. ಸಿನಿಮಾದಂತೆ ಬದುಕು ನಡೆಸಿದರೆ ಅದರ ಒಳಿತು ಹಾಗೂ ಕೆಡುಕು ಎರಡನ್ನು ಮನವರಿಕೆ ಮಾಡಿಕೊಳ್ಳಬಹುದು. ಸಿನಿಮಾವೇ ತನ್ನ ಜೀವನ ಎಂಬಂತೆ ಜೀವನ ನಡೆಸದೆ ಸಿನಿಮಾ ವಾಸ್ತವಿಕವೆಂದು ತಿಳಿದು ಬದುಕುವ ವ್ಯಕ್ತಿಯ ಜೀವನ ಸುಖಮಯವಾಗುತ್ತದೆ. ಜೀವನವನ್ನು ಸಹ ಇದೇ ರೀತಿ ಅರ್ಥೈಸಿಕೊಳ್ಳಬೇಕು. ಕಷ್ಟವನ್ನು ಅರಗಿಸಿ ಬೆಳೆಯ ಬೇಕಾದರೆ ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಸಮಾಜ ಪೀಡಕರು, ಸಮಾಜದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಯಾಗದೆ ಸ್ವ ಪ್ರಯತ್ನ ಮಾಡಿದರೆ ಯಶಸ್ಸು ಎನ್ನುವುದು ಜೀವನದಲ್ಲಿ ನಿಮ್ಮ ಪಾಲಿಗೆ ಒದಗಿ ಬರಲಿದೆ. ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ನಹೀ ಜ್ಞಾನೇನ ಸದೃಶಂ ಎನ್ನುವಂತೆ ಪ್ರತಿದಿನವೂ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಈ ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ನಾವು ಬಾಳಲು ಶ್ರಮಿಸಬೇಕು ಈ ಮೂಲಕ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನು ಕೇವಲ 44 ದಿನ ಮಾತ್ರ ಉಳಿದಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಈ ಅವಧಿಯಲ್ಲಿ ಅತ್ಯುತ್ತಮವಾಗಿ ಓದಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಭದ್ರವಾದ ಅಡಿಗಲು ಹಾಕಬೇಕು ಎಂದು ಅವರು ತಿಳಿಸಿದರು.
ಜಿ.ಎ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ ಮಾತನಾಡಿ, ಭಾರತ ವಿಶಿಷ್ಟವಾದ ದೇಶವಾಗಿದೆ. ಇಲ್ಲಿ ಇರುವಷ್ಟು ಜಾತಿ-ಧರ್ಮ- ಭಾಷೆ-ವೈಶಿಷ್ಟ್ಯಗಳು ಜಗತ್ತಿನ ಬೇರೆ ದೇಶದಲ್ಲಿ ಇಲ್ಲ. ವಿದ್ಯಾರ್ಥಿಗಳು ನಮ್ಮ ದೇಶದ ಶ್ರೇಷ್ಠ ಸಂಪತ್ತಾಗಿದ್ದು ಮುಂದಿನ ದಿನಗಳಲ್ಲಿ ತಾವೆಲ್ಲರೂ ಶ್ರೇಷ್ಠ ಸಾಧನೆಯ ಮೂಲಕ ಉತ್ತಮ ನಾಗರಿಕರಾಗಿ ಸಮಾಜ ಹಾಗೂ ದೇಶಕ್ಕೆ ಉನ್ನತ ಕೊಡುಗೆ ನೀಡಬೇಕು ಎಂದು ಹೇಳಿದರು.
ಕೆಎಲ್ ಇ ಸಂಸ್ಥೆಯ ಆಜೀವ ಸದಸ್ಯ ಮಹದೇವ ಬಳಿಗಾರ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎ.ಆರ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಯ ಏಳುಕೋಟಿ ಪರಿಚಯಿಸಿದರು. ಪಿ.ಎಸ್. ಚಿಮ್ಮಡ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿಗಳಾದ ವಿವೇಕ, ತನುಶ್ರೀ, ಪೂಜಾ, ಸಾಧನಾ ಅನಿಸಿಕೆ ವ್ಯಕ್ತಪಡಿಸಿದರು. ಎಚ್.ಜಿ. ವೀರಗಂಟಿ, ಎ.ಜಿ. ಬಾಯನ್ನವರ ಪ್ರಶಸ್ತಿ ವಿತರಣೆ ನಡೆಸಿಕೊಟ್ಟರು. ಎಸ್.ಎಸ್. ಹಲವಾಯಿ ಶಿಕ್ಷಕರ ಪರ ನುಡಿಗಳನ್ನಾಡಿದರು. ಸಿ.ಎಂ.ಪಾಗಾದ, ವಿ.ಐ.ಅಂಗಡಿ ನಿರೂಪಿಸಿದರು. ಮಹಾಂತೇಶ ಮಗದುಮ್ಮ ವಂದಿಸಿದರು.
ಅತ್ಯಂತ ವಿಶಿಷ್ಟವಾಗಿ ನಡೆಯಿತು ಬೆಳಗಾವಿ ಜಿ.ಎ.ಪ್ರೌಢಶಾಲೆಯ ಸ್ನೇಹ ಸಮ್ಮೇಳನ, ವಿದ್ಯಾರ್ಥಿಗಳ ಬೀಳ್ಕೊಡುಗೆ SSLC ಪರೀಕ್ಷೆಗೆ ಉಳಿದಿರುವುದು ಕೇವಲ 44 ದಿನ ಮಾತ್ರ: ನಿರಂತರ ಅಧ್ಯಯನದಿಂದ ಸಾಧನೆ ಮಾಡಲು ನಿರಂಜನ ಪಾಟೀಲ ಕರೆ
