ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಮುಂಬರುವ ಮಾರ್ಚ್ 21ರಿಂದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಮಿಲಿಯನ್ ಡಾಲರ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಕಳೆದ 17 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರೂ ಕಪ್ ಗೆಲ್ಲಲು ಪದೇ ಪದೇ ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ಹೌದು, ಕಳೆದ ಬಾರಿ ಫಾಫ್ ಡು ಪ್ಲೆಸಿಸ್ ಆರ್ಸಿಬಿ ತಂಡದ ನಾಯಕರಾಗಿದ್ದರು. ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡವು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಎಲ್ಲರಲ್ಲೂ ಇದೀಗ ಆರ್ಸಿಬಿ ತಂಡದ ನೂತನ ನಾಯಕ ಯಾರಾಗಬಹುದು ಎನ್ನುವ ಕುತೂಹಲ ಜೋರಾಗಿದೆ. ಇದೀಗ ಆರ್ಸಿಬಿ ನಾಯಕತ್ವದ ಕುರಿತಂತೆ ಫ್ರಾಂಚೈಸಿಯು ಮಹತ್ವದ ಅಪ್ಡೇಟ್ ನೀಡಿದೆ.
2025ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯು ಯಾವುದೇ ನಾಯಕರಾಗಿರುವ ಅನುಭವ ಇರುವ ಆಟಗಾರರನ್ನು ಖರೀದಿಸಲು ಮನಸು ಮಾಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಕೆ ಎಲ್ ರಾಹುಲ್, ಜೋಸ್ ಬಟ್ಲರ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರಂತಹ ನಾಯಕತ್ವದ ಅನುಭವ ಇರುವ ಆಟಗಾರರು ಹರಾಜಿನಲ್ಲಿ ಇದ್ದರೂ ಸಹಾ ಆರ್ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಮನಸ್ಸು ಮಾಡಿರಲಿಲ್ಲ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಯೇ ಮತ್ತೊಮ್ಮೆ ಆರ್ಸಿಬಿ ತಂಡದ ನಾಯಕರಾಗಬಹುದು ಎನ್ನುವ ಆಸೆ ಆರ್ಸಿಬಿ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದೆ.
ಇನ್ನು ಇದೆಲ್ಲದರ ನಡುವ ಆರ್ಸಿಬಿ ಫ್ರಾಂಚೈಸಿಯ ಸಿಒಒ ರಾಜೇಶ್ ಮೆನನ್ ತಮ್ಮ ತಂಡದ ನಾಯಕತ್ವದ ಕುರಿತಂತೆ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಇನ್ನು ಆರ್ಸಿಬಿ ತಂಡದ ನಾಯಕ ಯಾರಾಗಬೇಕು ಎನ್ನುವುದನ್ನು ತಾವಿನ್ನು ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ನಮ್ಮ ತಂಡದಲ್ಲಿ 4-5 ಮಂದಿ ನಾಯಕತ್ವದ ಗುಣ ಇರುವ ಆಟಗಾರರಿದ್ದಾರೆ. ನಾವು ಈವರೆಗೂ ನಮ್ಮ ತಂಡದ ಕ್ಯಾಪ್ಟನ್ ಯಾರಾಗಬೇಕು ಎನ್ನುವ ತೀರ್ಮಾನಕ್ಕೆ ಬಂದಿಲ್ಲ. ನಾವು ಈ ಬಗ್ಗೆ ಸೂಕ್ತ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ರಾಜೇಶ್ ಮೆನನ್ ಹೇಳಿದ್ದಾರೆ.
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಆರ್ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಇದುವರೆಗೂ ಒಟ್ಟಾರೆ 143 ಪಂದ್ಯಗಳಲ್ಲಿ ನಾಯಕನಾಗಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಆರ್ಸಿಬಿ ತಂಡವು 66 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, 70 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಆರ್ಸಿಬಿ ತಂಡವು ಈವರೆಗೆ ಕೇವಲ ಮೂರು ಬಾರಿ ಮಾತ್ರ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಸಾಕಷ್ಟು ಅಳೆದುತೂಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯು ತನಗೆ ಬೇಕಾದ ಆಟಗಾರರನ್ನು ಖರೀದಿಸಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.