ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಣಂತಿಯರು ಹಾಗೂ ಹಸುಗೂಸುಗಳ ಸಾವಿನ ಪ್ರಕರಣ ತಡೆಗಟ್ಟಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ- ಕಮ್ಯುನಿಸ್ಟ್ (ಎಸ್ಯುಸಿಐ) ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು, ಧರಣಿ ನಡೆಸಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಹಸುಗೂಸುಗಳ ಸಾವು ದಿನೇದಿನೇ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಸಾವಿನ ಪ್ರಮಾಣ ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಗುಣಮಟ್ಟದ ಔಷಧೋಪಚಾರ ಇಲ್ಲದಿರುವುದೇ ಕಾರಣ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯದ ಎಲ್ಲ ಕಡೆಯೂ ಗರ್ಭಿಣಿಯರು, ಬಾಣಂತಿಯರ ಸಾವು ನಿರಂತರ ಸಂಭವಿಸುತ್ತಿವೆ. ಆದರೆ, ಸರ್ಕಾರ ಎಲ್ಲವನ್ನೂ ಮುಚ್ಚಿ ಹಾಕುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಔಷಧಿಗಳು ಹಾಗೂ ವೈದ್ಯಕೀಯ ನಿರ್ಲಕ್ಷದಿಂದಾಗಿ ಬೆಳಗಾವಿ, ಬಳ್ಳಾರಿ, ಚಿಗಟೇರಿ, ಸಿದ್ದಾಪುರ ಸೇರಿ ವಿವಿಧ ಕಡೆಗಳಲ್ಲಿ ಬಾಣಂತಿಯರು, ಹಸುಗೂಸುಗಳು ಸಾವನ್ನಪ್ಪಿವೆ. ಹಲವಾರು ಆಸ್ಪತ್ರೆಗಳಲ್ಲಿ ಅಗತ್ಯ ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳೇ ಇಲ್ಲ’ ಎಂದು ಎಸ್ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ಡಳ್ಳಿ ಆರೋಪಿಸಿದರು.
ರಾಜ್ಯದಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ. ಅವಶ್ಯಕತೆಯ ಶೇ 30ರಷ್ಟು ಮಾತ್ರ ಔಷಧಗಳು ಉಗ್ರಾಣದಲ್ಲಿ ಇವೆ. ಎಲ್ಲ ಗೊತ್ತಿದ್ದರೂ ಸಂಬಂಧಿಸಿದ ಸಚಿವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಮಾತ್ರವಲ್ಲ; ಔಷಧಿಗಳ ಕೊರತೆಯಿಂದ ಸಾವು ಸಂಭವಿಸುತ್ತಿದ್ದರೂ ಬಜೆಟ್ನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದೂ ದೂರಿದರು.
ಎಐಕೆಕೆಎಂಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಣ ಜಡಗನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ. ವೈದ್ಯರು, ನರ್ಸ್, ಸಿಬ್ಬಂದಿ ಇಲ್ಲ. ಆಧುನಿಕ ಯಂತ್ರೋಪಕರಣಗಳಿಲ್ಲ. ಗುಣಮಟ್ಟದ ಔಷಧಿಗಳು ಬೇಕಾದರೆ ಖಾಸಗಿ ಆಸ್ಪತ್ರೆಗಳಿಗೆ ಬರೆದು ಕೊಡುತ್ತಿದ್ದಾರೆ.
ಆರೋಗ್ಯ ರಕ್ಷಣೆಗೆ ಬರುವ ರೋಗಿಗಳು ಮತ್ತಷ್ಟು ಅನಾರೋಗ್ಯ ಪೀಡಿತರಾಗುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಾಣಂತಿಯರು ಮೃತಪಡುತ್ತಿದ್ದಾರೆ ಎಂದು ಆರೋಪ ಮಾಡಿದರು.