ಬೆಳಗಾವಿ : ಬೆಳಗಾವಿ ಪೊಲಿಸರು ಇದುವರೆಗೆ ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಸಂಚರಿಸುವವರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸುತ್ತಿದ್ದರು. ಆದರೂ ಅದು ಫಲ ಕೊಟ್ಟಿರಲಿಲ್ಲ. ಇದರಿಂದ ಪೊಲೀಸರು ಈಗ ಮತ್ತೊಂದು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ಸಿಗಲಿದೆ ಕಾದು ನೋಡಬೇಕಾಗಿದೆ.
ಬೆಳಗಾವಿ ಪೊಲೀಸರ ನಡೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬೈಕ್ ಸವಾರರು ಕೆಲವರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದು ಬೆಳಗಾವಿಯಲ್ಲಿ ಮಾಮೂಲಿಯಾಗಿ ಕಂಡುಬರುವ ದೃಶ್ಯ. ಇದನ್ನು ಗಮನಿಸಿರುವ ಪೊಲೀಸರು ಕೊನೆಗೂ ಇದಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಲು ಮುಂದಾಗಿರುವುದು ಈಗ ಗಮನ ಸೆಳೆದಿದೆ.
ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಂಚರಿಸುವವರನ್ನು ನಿಲ್ಲಿಸಿ ಅವರ ಕೈಯಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ. ಇಲ್ಲವಾದರೆ ನಮ್ಮ ಹಾಗೆ ನೀವು ಸಹ ಜಾಗೃತಿ ಮೂಡಿಸಬೇಕಾದ ಸಂದರ್ಭ ಬರುತ್ತದೆ ಎಂಬ ಫಲಕವನ್ನು ಹಿಡಿದು ನಿಲ್ಲಿಸಲಾಗುತ್ತಿದೆ. ಇದು ಹೆಲ್ಮೆಟ್ ಧರಿಸದೆ ಸಂಚರಿಸುವ ಬೈಕ್ ಸವಾರರಿಗೆ ಅತ್ತ ಫಲಕವನ್ನು ಹಿಡಿದುಕೊಳ್ಳಬೇಕಲ್ಲ ಎಂಬ ಮುಜುಗರದ ವಾತಾವರಣವನ್ನು ಸೃಷ್ಟಿಸಿದೆ. ಹೀಗಾಗಿ ಅನಿವಾರ್ಯವಾಗಿ ಬೈಕ್ ಸವಾರರು ಈಗ ಹೆಲ್ಮೆಟ್ ಇಲ್ಲದೆ ಹೊರಗೆ ಕಾಲಿಡದ ಸ್ಥಿತಿ ಎದುರಾಗಿದೆ.