ಬೆಳಗಾವಿ: ಸತೀಶ್ ಜಾರಕಿಹೊಳಿ ಅವರು 2028ಕ್ಕೆ ಸಿಎಂ ಆಗುವ ಹೇಳಿಕೆ ನೀಡಿದ ಬಳಿಕ, ಅಭಿಮಾನಿಗಳು ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ. ಇದೀಗ ಲೋಕೋಪಯೋಗಿ ಸಚಿವ ಜಾರಕಿಹೊಳಿ ಅವರು ಸಿಎಂ ಆಗಲೆಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಹೌದು…. ಬೆಳಗಾವಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ ನಡುವೆ ಕಸರತ್ತು ಜೋರಾಗಿ ನಡೆದಿರುವ ಬೆನ್ನಲ್ಲೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 2028ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಿದ್ದು ಏನಾಗುತ್ತದೆಯೋ ಕಾದು ನೋಡೋಣ ಎಂದಿದ್ದಾರೆ. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕ ‘ಸತೀಶ್ ಜಾರಕಿಹೊಳಿ ಮುಂದಿನ ಸಿಎಂ’ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
ಕುಂಭಮೇಳದಲ್ಲಿ ಹರಕೆ ಹೊತ್ತ ಅಭಿಮಾನಿಗಳು: ಸಚಿವ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಸತೀಶ್ ಜಾರಕಿಹೊಳಿ ‘ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಇದರ ನಡುವೆ ಬೆಳಗಾವಿ ಜಿಲ್ಲೆಯ ಈ ಮೂವರು ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಅವರ ಭಾವಚಿತ್ರ ಹಿಡಿದು ಮುಂದಿನ ಸಿಎಂ ಸಚಿವ ಸತೀಶ್ ಜಾರಕಿಹೊಳಿ ಆಗಲೆಂದು ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.
ವೈರಲ್ ಆಗಿತ್ತು ಶಬರಿಮಲೆಯಲ್ಲೂ ಹರಕೆ ಹೊತ್ತಿದ್ದ ಸುದ್ದಿ: ಬೆಳಗಾವಿಯಲ್ಲಿ ಅಯ್ಯಪ್ಪ ಮಾಲಾಧಾರಿಯಿಂದ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಿಶೇಷ ಹರಕೆ ಹೊತ್ತಿದ್ದರು. ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿಯಾಗಿರುವ ಸಂತೋಷ ಸಂಕಪಾಳೆ ಎಂಬುವವರಿಂದ ವಿಶೇಷ ಹರಕೆ ಹೊತ್ತು ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು ಎಂದು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಸತೀಶ್ ಜಾರಕಿಹೊಳಿ ಫೋಟೋ ತಲೆಮೇಲೆ ಹೊತ್ತುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಮೈಕೊಡವಿ ನಿಂತ ಸಾಹುಕಾರ್: ಕರ್ನಾಟಕದಲ್ಲಿ ಮೂರು ಉಪಚುನಾವಣೆಗಳು ಮುಗಿದು ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ ಜೋರಾಗಿ ನಡೆದಿದೆ. ‘ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಎರಡು ಬಣಗಳಾಗಿ ತೀವ್ರ ಸಿಎಂ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ-ಡಿಕೆ ಶಿವಕುಮಾರ ಪರಸ್ಪರ ದಾಳ ಉರುಳಿಸುತ್ತಲೇ ಇದ್ದಾರೆ. ಈ ನಡುವೆ ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಸಹ ಮೈಕೊಡವಿ ನಿಂತಿರುವುದು ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಕುತೂಹಲ ಕೆರಳಿಸಿದೆ. ಇದರ ಜೊತೆ ಇವರ ಅಭಿಮಾನಿಗಳು ಸಹ ಕುಂಭಮೇಳ-ಶಬರಿಮಲೆಯಲ್ಲೂ ಸೇರಿದಂತೆ ವಿವಿಧೆಡೆ ಸಹ ಹರಕೆ ಹೊತ್ತು ಎಲ್ಲರ ಗಮನ ಸೆಳೆಯುತ್ತಿದ್ದಾರೆ.