ಕಾಗವಾಡ: ಉಗಾರ ಬುದ್ರಕ ಗ್ರಾಮ
ಪಂಚಾಯಿತಿಗೆ ಎಲ್ಲ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಬೀಗ ಜಡಿದು ಪಿಡಿಓ ಬದಲಾವಣೆ ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಉಗಾರ ಬುದ್ರಕ್ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಎಲ್ಲ 26 ಜನ ಸದಸ್ಯರು ಸಾಮೂಹಿಕವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಹೊರಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪಿಡಿಓ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಟಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಇಓ ವೀರಣ್ಣಾ ವಾಲಿ ಪ್ರತಿಭಟನೆ ನಿರತ ಸದಸ್ಯರ ಜೊತೆ ಮಾತನಾಡಿ, ಬೇಡಿಕೆಗಳನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದು ವಾರದ ಒಳಗಾಗಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೂ ಪ್ರತಿಭಟನಾಕಾರು ಅದಕ್ಕೆ ಜಗ್ಗದೇ ಪ್ರತಿಭಟನೆ ಮುಂದುವರೆಸಿದರು.
ಉಪಾಧ್ಯಕ್ಷ ಅಮೀನ ಶೇಖ ಹಾಗೂ ಸದಸ್ಯ ಅಣ್ಣಾಗೌಡಾ ಪಾಟೀಲ ಮಾತನಾಡಿ, ಕಳೆದ ಎರಡೂವರೇ ವರ್ಷದಿಂದ ಇಲ್ಲಿಯ ಪಿಡಿಓ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವೇಳೆಗೆ ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ ಎಂದು ಆರೋಪ ಮಾಡಿದರು.