ಬೆಳಗಾವಿ: ಮಡಿವಾಳ ಮಾಚಿದೇವರು ಬಸವಣ್ಣನವರಕಿಂತಲ್ಲೂ ಹಿರಿಯವರಾಗಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ದೈವಾಂಶಸಂಭೂತರಾಗಿದ್ದರು. ಕಾಯಕವೇ ಕೈಲಾಸ ಎನ್ನುವಂತೆ ತಮ್ಮ ಕಾಯಕದಲ್ಲಿ ನಿಷ್ಠೆ ಉಳ್ಳವರಾಗಿದ್ದರು ಎಂದು ಸಾಹಿತಿ ಡಾ.ಹೇಮಾ ಸುನ್ನೊಳ್ಳಿ ತಿಳಿಸಿದರು.
ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ(ಫೆ.1) ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅನುಭವ ಮಂಟಪದಲ್ಲಿ ಇವರು ಮುಖ್ಯವಾದ ಸ್ಥಾನವನ್ನು ಹೊಂದಿದ್ದ ಮಾಚಿದೇವರು, ಶಿವಶರಣ ತತ್ವಗಳನ್ನು ಪ್ರಸಾರ ಮಾಡುವುದರ ಜತೆಗೆ ತಾವೂ ಅವುಗಳನ್ನು ಅನುಸರಿಸುವ ಮೂಲಕ ಶರಣರಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಿಪಿಐ ಜ್ಯೋತಿರ್ಲಿಂಗ ಹೊನ್ನಾಕಟ್ಟಿ, ಮಡಿವಾಳ ಸಮಾಜದ ಅಧ್ಯಕ್ಷ ಬಾಳಪ್ಪ ಮಡಿವಾಳರ, ಅಶೋಕ ಜಾಧವ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸುನಿತಾ ದೇಸಾಯಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪುಲಕೇಶಿ ಗಿರಿಯಾಲ ಹಾಗೂ ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು.