ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ 2025 ರ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಇದು ಸಂಸತ್ತಿನಲ್ಲಿ ಅವರ ಸತತ ಎಂಟನೇ ಬಜೆಟ್ ಮಂಡನೆಯಾಗಿದೆ. ಮೋದಿ 3.0.ಕೇಂದ್ರ ಸರ್ಕಾರವು `ಬಡವರು, ಯುವಕರು, ರೈತರು ಮತ್ತು ಸ್ತ್ರೀಯರ (ಗರೀಬ್, ಯೂಥ್, ಅನ್ನದಾತ, ನಾರಿ) ಅಭ್ಯುದಯಕ್ಕಾಗಿ 10 ವಿಸ್ತೃತ ವಲಯಗಳಲ್ಲಿ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಗೂ ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದಾರೆ. ರೈತರು, ಖಾಸಗಿ ವಲಯದಲ್ಲಿನ ಹೂಡಿಕೆ, ಗೃಹಬಳಕೆ ಮತ್ತು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವುದರೊಂದಿಗೆ ಮಧ್ಯಮ ವರ್ಗದ ಅಭಿವೃದ್ಧಿ ಬಜೆಟ್ ನ ಮುಖ್ಯ ಗುರಿ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಹಣಕಾಸಿನ ಕೊರತೆಯನ್ನು 4.8% ಕ್ಕೆ ನಿಗದಿಪಡಿಸಲಾಗಿದೆ, ಆದರೆ ಆರ್ಥಿಕ ವರ್ಷ 2026ಕ್ಕೆ ಅಂದಾಜು ವಿತ್ತೀಯ ಕೊರತೆಯು 4.4% ಆಗಿದೆ.
ಕ್ಯಾಪೆಕ್ಸ್ ಮತ್ತು ಮೂಲಸೌಕರ್ಯಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ ₹1.5 ಲಕ್ಷ ಕೋಟಿ ಘೋಷಿಸಲಾಗಿದೆ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ₹12 ಲಕ್ಷದವರೆಗಿನ ಆದಾಯದ ಮೇಲೆ ಶೂನ್ಯ ಆದಾಯ ತೆರಿಗೆಯನ್ನು ವಿತ್ತ ಸಚಿವರು ಘೋಷಿಸಿದ್ದಾರೆ. ದೇಶಾದ್ಯಂತ ಸುಮಾರು 50ಕ್ಕೂ ಹೆಚ್ಚು ಪ್ರವಾಸಿತಾಣಗಳ ಅಭಿವೃದ್ಧಿ ಮಾಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಹೋಂ ಸ್ಟೇಗಳಿಗೆ ಮುದ್ರಾಲೋನ್ ನೀಡಲು ಸಹ ನಿರ್ಧರಿಸಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ರೂ 5 ಲಕ್ಷಕ್ಕೆ ಏರಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲಗಳಿಗೆ ಮಿತಿಯನ್ನು ರೂ 3 ಲಕ್ಷದಿಂದ ರೂ 5 ಲಕ್ಷ ರೂ.ಗಳಿಗೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಿದ್ದಾರೆ. ಜೊತೆಗೆ ಹೆಚ್ಚಿನ ಇಳುವರಿಯ ಬೀಜಗಳಿಗಾಗಿ ರಾಷ್ಟ್ರೀಯ ಮಿಷನ್ ಆರಂಭಿಸುವುದಾಗಿಯೂ ತಿಳಿಸಿದ್ದಾರೆ.
ಉದ್ಯಮ ಸಾಲದ ಮಿತಿ ಡಬಲ್..
ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ನೀಡುತ್ತಿರುವ ಸಾಲದ ಮಿತಿಯನ್ನು ಈ ಬಜೆಟ್ನಲ್ಲಿ 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳವರೆಗೂ ಏರಿಸಲಾಗಿದೆ. ಇದರೊಂದಿಗೆ ಸ್ಟಾರ್ಟ್ಅಪ್ಗಳಿಗೆ ಸಹ 10 ಕೋಟಿ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.. ರಫ್ತುದಾರ ಎಂಎಸ್ಎಂಇಗಳಿಗೆ 20 ಕೋಟಿ ರೂ.ಗಳವರೆಗೂ ದೀರ್ಘಾವಧಿ ಸಾಲಗಳು ನೀಡಲಾಗುವುದು ಎಂದು ಸಚಿವರು ಪ್ರಕಟಿಸಿದ್ದಾರೆ.
ಮಹಿಳೆಯರಿಗೆ, ಎಸ್ಸಿ-ಎಸ್ಟಿ ಸಮುದಾಯಕ್ಕೆ 2 ಕೋಟಿ ರೂ. ವರೆಗೆ ಉದ್ಯಮ ಸಾಲ
ಸೂಕ್ಷ್ಮ, ಕಿರು ಮತ್ತು ಮಧ್ಯಮ ಉದ್ಯಮ ಆರಂಭಿಸಲಿರುವ ಮಹಿಳೆಯರಿಗೆ 2 ಕೋಟಿ ರೂಪಾಯಿವರೆಗೂ ಸಾಲವನ್ನು ಎಂಎಸ್ಎಂಇ ಯೋಜನೆಯಡಿ ಒದಗಿಸಲಿದೆ. ಅದೇ ರೀತಿ ಹೊಸದಾಗಿ ಉದ್ಯಮ ಪ್ರಾರಂಭಿಸಲಿರುವ ಎಸ್ ಸಿ ಎಸ್ ಟಿ ವರ್ಗಕ್ಕೂ ಈ ಸಾಲ ನೀಡಲಾಗುವುದು ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
1.5 ಲಕ್ಷ ಗ್ರಾಮೀಣ ಅಂಚೆ ಕಚೇರಿ
ಗ್ರಾಮೀಣ ಪ್ರದೇಶದ ಜನರು ಉಳಿತಾಯ, ಪಿಂಚಣಿ, ಬಿಲ್ ಪಾವತಿ ಸೇರಿದಂತೆ ಅನೇಕ ಹಣಕಾಸಿನ ವಹಿವಾಟುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಗಳನ್ನು ಅವಲಂಬಿಸಿದ್ದಾರೆ. ಗ್ರಾಮೀಣ ಆರ್ಥಿಕತೆಯ ಸಬಲೀಕರಣಕ್ಕಾಗಿ ದೇಶಾದ್ಯಂತ 1.5 ಲಕ್ಷಕ್ಕೂ ಅಧಿಕ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿಗಳನ್ನು ತೆರೆಯಲಾಗುವುದು ಎಂದು ಪ್ರಕಟಿಸಲಾಗಿದೆ.
ವಲಸೆ ತಪ್ಪಿಸಲು ಯೋಜನೆ
ಗ್ರಾಮೀಣ ಪ್ರದೇಶಗಳಿಂದ ವಲಸೆ ತಪ್ಪಿಸುವ ಸಲುವಾಗಿ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆ ಸಾಧಿಸಲು 6 ವರ್ಷಗಳ ಯೋಜನೆಯನ್ನೂ ಆರಂಭಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಇದು ತೊಗರಿ, ಮಸೂರ್ ಮತ್ತು ಉದ್ದಿನ ಬೇಳೆಗಳ ಉತ್ಪಾದನೆಗೆ ಗಮನ ಹರಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಅವಕಾಶಗಳನ್ನು ಸೃಷ್ಟಿಸಿ ವಲಸೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಕ್ಯಾನ್ಸರ್ ಸೇರಿ 36 ಜೀವ ರಕ್ಷಕ ಔಷಧಿಗಳಿಗೆ ತೆರಿಗೆ ವಿನಾಯಿತಿ
ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ನೀಡಲಾಗುವುದ ಸುಮಾರು 36 ಜೀವ ರಕ್ಷಕ ಔಷಧಿಗಳನ್ನು ಸಂಪೂರ್ಣ ತೆರಿಗೆ ಮುಕ್ತ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ…
ಬೀದಿ ವ್ಯಾಪಾರಿಗಳು ಮತ್ತು ಆನ್ಲೈನ್ ಮತ್ತು ನಗರ ಕೆಲಸಗಾರರಿಗೆ, ಗುರುತಿನ ಕಾರ್ಡ್ ನೀಡಲಾಗುತ್ತದೆ ಮತ್ತು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ನಗರ ಕಾರ್ಮಿಕರ ಸಾಮಾಜಿಕ-ಆರ್ಥಿಕ ಉನ್ನತಿಗಾಗಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಬ್ಯಾಂಕ್ಗಳಿಂದ ವರ್ಧಿತ ಸಾಲಗಳೊಂದಿಗೆ ನವೀಕರಿಸಲಾಗುತ್ತದೆ. UPI ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ಗಳಿಗೆ 30 ಸಾವಿರ ರೂ ಮಿತಿ ಘೋಷಣೆ ಮಾಡಲಾಗುತ್ತದೆ. ಗಿಗ್ ವರ್ಕರ್ ಗಳನ್ನು ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ( PM-JAY) ಯಡಿ ಸೇರಿಸಲಾಗುತ್ತದೆ. ಇದರಿಂದ 1 ಕೋಟಿ ರೂಪಾಯಿಗೂ ಅಧಿಕ ಜನರಿಗೆ ಅನುಕೂಲ ಆಗಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.