ನವದೆಹಲಿ: ಭಾರತೀಯ ಜನತಾ ಪಕ್ಷ(BJP)ವು 2024 ರ ಲೋಕಸಭೆ ಚುನಾವಣೆಗೆ 1,737.68 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವೆಚ್ಚದ ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟು ಮೊತ್ತದಲ್ಲಿ 884.45 ಕೋಟಿ ರೂ.ಗಳನ್ನು ಪಕ್ಷದ ಸಾಮಾನ್ಯ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದ್ದು, 853.23 ಕೋಟಿ ರೂ.ಗಳನ್ನು ಅಭ್ಯರ್ಥಿ ಸಂಬಂಧಿತ ವೆಚ್ಚಗಳಿಗಾಗಿ ವಿನಿಯೋಗಿಸಲಾಗಿದೆ ಎಂದು ಅದು ತಿಳಿಸಿದೆ.
ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿನ ಜಾಹೀರಾತುಗಳು, ಬೃಹತ್ ಎಸ್ಎಂಎಸ್ (SMS) ಪ್ರಚಾರಗಳು ಮತ್ತು ಕೇಬಲ್, ವೆಬ್ಸೈಟ್ಗಳು ಮತ್ತು ಟಿವಿ ಚಾನೆಲ್ಗಳಾದ್ಯಂತ ಪ್ರಚಾರದ ವಿಷಯವನ್ನು ಒಳಗೊಂಡ ಮಾಧ್ಯಮ ಜಾಹೀರಾತುಗಳಿಗಾಗಿ ಸುಮಾರು 611.50 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಪಕ್ಷವು ತನ್ನ ಪೋಸ್ಟರ್ಗಳು, ಬ್ಯಾನರ್ಗಳು, ಹೋರ್ಡಿಂಗ್ಗಳು ಮತ್ತು ಧ್ವಜಗಳಂತಹ ಪ್ರಚಾರ ಸಾಮಗ್ರಿಗಳಿಗಾಗಿ 55.75 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಅಲ್ಲದೆ, ವೇದಿಕೆಗಳು, ಆಡಿಯೋ ಸೆಟಪ್ಗಳು, ಬ್ಯಾರಿಕೇಡ್ಗಳು ಮತ್ತು ವಾಹನಗಳ ವ್ಯವಸ್ಥೆ ಸೇರಿದಂತೆ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಮತ್ತು ರ್ಯಾಲಿಗಳಿಗೆ ಬಿಜೆಪಿಯ 19.84 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಪಕ್ಷದ ಕೇಂದ್ರ ಕಚೇರಿಯಿಂದ ಅಧಿಕಾರ ಪಡೆದ ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚ 168.92 ಕೋಟಿ ರೂ., ಇತರ ಪಕ್ಷದ ನಾಯಕರ ಪ್ರಯಾಣಕ್ಕೆ 2.53 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ತನ್ನ ಪ್ರಚಾರಕ್ಕಾಗಿ ಜನಸಂಪರ್ಕ ಮತ್ತು ಪ್ರಚಾರ ಅಭಿಯಾನಗಳನ್ನು ಹೆಚ್ಚು ಅವಲಂಬಿಸಿತ್ತು ಎಂಬುದು ಈ ಖರ್ಚುಗಳಿಂದ ತಿಳಿದು ಬರುತ್ತದೆ.