ಬೆಳಗಾವಿ : ಒಂದು ಕಾಲದ ಬಳ್ಳಾರಿ ಚಡ್ಡಿ ದೋಸ್ತಿಗಳಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ರಾಜಕೀಯ ತಿಕ್ಕಾಟ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಅದರಲ್ಲೂ ಮುಖ್ಯವಾಗಿ ಬೆಳಗಾವಿ ಜಿಲ್ಲೆಯ ಬಲಾಢ್ಯ ಕಾಂಗ್ರೆಸ್ ನಾಯಕರಾಗಿರುವ ಸತೀಶ ಜಾರಕಿಹೊಳಿ ಅವರು 2028 ಕ್ಕೆ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರು ತಂತ್ರ ಹೆಣೆಯುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸತೀಶ ಜಾರಕಿಹೊಳಿ ಅವರ ನಡುವೆ ಕೆಲ ದಿನಗಳಿಂದ ಶೀತಲ ಸಮರ ನಡೆಯುತ್ತಿರುವುದು ಗುಟ್ಟಿನ ಸಂಗತಿ ಏನಲ್ಲ.
ಇದೀಗ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿರುವ ನಾಯಕ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸತೀಶ ಜಾರಕಿಹೊಳಿ ಅವರಿಗೆ ಪರ್ಯಾಯ ನಾಯಕನಾಗಿ ಬೆಳೆಯುವರೋ ಎಂಬ ಚರ್ಚೆಗೆ ಸಹ ಕಾರಣವಾಗಿದೆ.
ಸತೀಶ ಜಾರಕಿಹೊಳಿಗೆ ಪರ್ಯಾಯವಾಗಿ ಎಸ್ಟಿ ನಾಯಕರನ್ನು ಕಾಂಗ್ರೆಸ್ನಲ್ಲಿ ಬೆಳೆಸುವುದಕ್ಕಾಗಿಯೇ ಶ್ರೀರಾಮುಲು ಅವರನ್ನು ಡಿಕೆಶಿ ಬೆಳೆಸುತ್ತಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಾಲ್ಮೀಕಿ ಹಾಗೂ ಎಸ್ಟಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಪರ್ಯಾಯ ನಾಯಕರನ್ನು ಬೆಳೆಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀರಾಮುಲು ಅವರನ್ನು ಬೆಳೆಸುತ್ತಿದ್ದಾರೆ. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ಆದರೆ ನನ್ನ ಆರೋಪ ಮಾಡಿ ಹೋಗೋದು ಬೇಡ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಶ್ರೀರಾಮುಲು ಅವರ ಮಾವ ಕೊಲೆಯಾದ ವೇಳೆ ದ್ವೇಷ ಸಾಧಿಸಯತ್ತಾ ಕ್ರಿಮಿನಲ್ ಹಾದಿಯಲ್ಲಿ ಹೋಗುತ್ತಿದ್ದನು. ಆಗ ಶ್ರೀರಾಮುಲು ಅವರನ್ನು ಕರೆದುಕೊಂಡು ನನ್ನ ಜೊತೆಯಲ್ಲಿಯೇ ಇಟ್ಟುಕೊಂಡು ಆತ್ಮೀಯ ಸ್ನೇಹಿತನಾಗಿ ಬೆಳೆಸಿದ್ದೇನೆ. ರಾಜಕೀಯವಾಗಿ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೇನೆ. ಯಡಿಯೂರಪ್ಪ ಅವಧಿಯಲ್ಲಿ ಎಸ್ಟಿ ನಾಯಕ ಶ್ರೀ ರಾಮುಲು ಅವರಿಗೆ ಸಚಿವ ಸ್ಥಾನವನ್ನೂ ಕೊಡಿಸಿದ್ದೇನೆ. ಒಬ್ಬ ತಾಯಿ ಮಗನನ್ನು ಬೆಳೆಸುವಂತೆ ಶ್ರೀರಾಮುಲು ಅವರನ್ನು ಬೆಳೆಸಿದರೂ, ತಾಯಿ ಎದೆಗೆ ಒದ್ದು ಹೋದಂತೆ ಇದೀಗ ರಾಮುಲು ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸುತ್ತಾ ನಾನು ಪಕ್ಷ ಬಿಟ್ಟು ಹೋಗಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಶ್ರೀರಾಮುಲು ಪಕ್ಷ ಬಿಡುವುದಕ್ಕೆ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಸತೀಶ್ ಜಾರಕಿಹೊಳಿ ಒಬ್ಬರೇ ಎಸ್ಟಿ ಸಮುದಾಯದ ನಾಯಕರಾಗಿ ಮೆರೆಯುತ್ತಿದ್ದಾರೆ. ಹೀಗಾಗಿ, ಸತೀಶ್ ಜಾರಕಿಹೊಳಿ ಅವರಿಗೆ ಪರ್ಯಾಯವಾಗಿ ಎಸ್ಟಿ ನಾಯಕರನ್ನು ಕಾಂಗ್ರೆಸ್ನಲ್ಲಿ ಬೆಳೆಸುವುದಕ್ಕಾಗಿಯೇ ಶ್ರೀರಾಮುಲು ಅವರನ್ನು ಸ್ವತಃ ಡಿ.ಕೆ. ಶಿವಕುಮಾರ್ ಎತ್ತಿಕಟ್ಟಿ ಬೆಳೆಸುತ್ತಿದ್ದಾರೆ.
ಶ್ರೀರಾಮುಲು ಪಕ್ಷ ಬಿಟ್ಟು ಹೋಗುತ್ತಾರೆ ಎಂದರೆ ಅದು ಹೊಸದಲ್ಲ. ಈ ಹಿಂದೆ ಬಿಎಸ್ ಆರ್ ಕಾಂಗ್ರೆಸ್ ಕ್ಷ ಮಾಡುವಾಗಲೇ ನಾನು ಬಿಜೆಪಿ ಪಕ್ಷ ಬಿಡಬೇಡ ಅಂತ ಹೇಳಿದ್ದೆ. ಆಗ ನನ್ನ ಸಿಬಿಐ ಅರೆಸ್ಟ್ ಮಾಡ್ತಾರೆ. ಬಹಳ ಕಷ್ಟ ನಮಗೆ ಇದೆ ಎಂತಲೂ ಹೇಳಿ, ಸುಮ್ಮನಿರುವಂತೆ ತಿಳಿಸಿದ್ದೆನು. ಆದರೂ ರಾಜಕೀಯ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನ ಮಾತನ್ನು ಕೇಳಲಿಲ್ಲ. ಇದೀಗ ಯಾರದ್ದೋ ಮಾತು ಕೇಳಿಕೊಂಡು ಅವರು ಪಕ್ಷ ಬಿಡೋದಾದ್ರೆ ಬಿಡಲಿ. ಆದರೆ ನನ್ನ ಆರೋಪ ಮಾಡಿ ಹೋಗೋದು ಬೇಡ. ಬಳ್ಳಾರಿ ಭಾಗದಲ್ಲಿ ಅವರು ಪಕ್ಷ ಬಿಡ್ತಾರೆ ಅಂತ ಚರ್ಚೆ ಆಗ್ತಾ ಇದೆ ಎಂದು ಜನಾರ್ಧನ ರೆಡ್ಡಿ ಹೇಳಿದರು.
ಇನ್ನು ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ಆಗ್ತಾ ಇದೆ. ಸತೀಶ್ ಜಾರಕಿಹೊಳಿ ಮಣಿಸಲು ಡಿಕೆಶಿ ಅವರು ಶ್ರೀರಾಮುಲು ಸೇರ್ಪಡೆ ಮಾಡಿಕೊಳ್ಳಲು ಪ್ಲಾನ್ ಆಗಿದೆ ಅಂತ ಚರ್ಚೆ ಆಗ್ತಾ ಇದೆ. ನಾನು ಕರ್ಮ ಸಿದ್ಧಾಂತ ನಂಬೋನು. ಪಕ್ಷ ನನಗೆ ನಾಳೆ ರಾಮುಲು ಪರವಾಗಿ ಕೆಲಸ ಮಾಡಲು ಹೇಳಿದರೆ ನಾನು ಕೆಲಸ ಮಾಡ್ತೇನೆ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಅಧ್ಯಕ್ಷ ಅಂತ ತಿರ್ಮಾನ ಮಾಡಿದರೆ ನಾವು ಒಪ್ಪಲೇಬೇಕು. ಮೋದಿ ಪ್ರಧಾನಿ ಅಭ್ಯರ್ಥಿ ಅಂತ ಹೇಳಿದಾಗ, ಅಡ್ವಾಣಿ ಸಹಿತ ಎಲ್ಲರೂ ಕೆಲಸ ಮಾಡಿದ್ದಾರೆ. ಹಾಗೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಅಂದ ಮೇಲೆ ನಾವು ಒಪ್ಪಬೇಕು. ಅದು ನಾಲ್ಕು ಜನರಿಗೆ ಇಷ್ಟ ಇಲ್ಲ ಅಂದ್ರೆ, ನೀವು ಅವರ ಜೊತೆಗೆ ಹೋಗಿ ನಿಂತ್ರೆ ಸರಿಯಲ್ಲ ಎಂದು ಹೇಳಿದರು.