ಬೆಳಗಾವಿ: ಫೈನಾನ್ಸ್ ನಲ್ಲಿ ಸಾಲ ಮಾಡಿ ಬೇರೆಯವರಿಗೆ ನೀಡಿದ್ದ ಹಣವನ್ನು ತುಂಬದೇ ಇರುವುದಕ್ಕೆ ಮನನೊಂದು ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕತಿ ಸಮೀಪದ ಬರ್ಡೆ ಧಾಬಾ ಹಿಂಬದಿ ಬುಧವಾರ ನಡೆದಿದೆ.
ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಆತ್ಮಹತ್ಯೆ ಮಾಡಿಕೊಂಡವರು.
ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದ ಇವರು, ಸಬ್ಸಿಡಿ ಆಸೆಗೆ ಯಮನಾಪುರ ಗ್ರಾಮದ ಹೊಳೆಪ್ಪ ದಡ್ಡಿ ಎಂಬಾತನಿಗೆ ಸಾಲ ಮಾಡಿ ಕೊಟ್ಟಿದ್ದರು. ಸಾಲದ ಹಣದಲ್ಲಿ ಅರ್ಧದಷ್ಟು ಹಣವನ್ನು ತಾವೇ ತುಂಬುವುದಾಗಿ ಹೊಳೆಪ್ಪ ದಡ್ಡಿ ನಂಬಿಸಿದ್ದ. ತಮ್ಮದೇ ದಾಖಲೆ ನೀಡಿ ಫೈನಾನ್ಸ್ ನಲ್ಲಿ ಸರೋಜಾ ಸಾಲ ಪಡೆದಿದ್ದರು. ಇದರಲ್ಲಿ ಅರ್ಧ ಹಣವನ್ನು ದಡ್ಡಿ ಎಂಬುವರಿಗೆ ನೀಡಿದ್ದರು. ಎಲ್ಲ ಕಂತುಗಳನ್ನು ತಾವೇ ತುಂಬುದಾಗಿ ಮಹಿಳೆಗೆ ಆತ ಹೇಳಿದ್ದ. ಎರಡು ವರ್ಷಗಳ ಕಾಲ ಬಡ್ಡಿ ಸಮೇತ ಹಣವನ್ನು ತುಂಬುವುದಾಗಿ ಹೇಳಿದ್ದ. ಕೆಲವು ಕಂತುಗಳನ್ನು ತುಂಬಿದ ನಂತರ ತುಂಬದೆ ವಂಚಿಸಿದ್ದಾನೆ ಎಂದು ಮಹಿಳೆಯ ಮಗ ದೂರಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ತಾಲೂಕು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸುಮಾರು 7000 ಕ್ಕೂ ಹೆಚ್ಚು ಮಹಿಳೆಯರಿಂದ ಸಾಲ ಮಾಡಿಸಿ ಹೊಳೆಪ್ಪ ದಡ್ಡಿ ಹಣ ಪಡೆದಿದ್ದ. ಒಟ್ಟು 19 ಕೋಟಿ ರೂ. ವಂಚನೆ ಮಾಡಿರುವ ಬಗ್ಗೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.