ವಾಷಿಂಗ್ಟನ್ ಡಿಸಿ: ಅಮೇರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು.
ಟ್ರಂಪ್ ಗೂ ಮೊದಲು ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ,
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ, ಟ್ರಂಪ್ ಅವರ ಕುಟುಂಬ ಮತ್ತು ಕ್ಯಾಬಿನೆಟ್ ಸದಸ್ಯರ ಜೊತೆಗೆ, ಎಲೋನ್ ಮಸ್ಕ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಭಾರತದ ಉದ್ಯಮಿ ಮುಖೇಶ ಅಂಬಾನಿ ಸೇರಿದಂತೆ ಟೆಕ್ ಉದ್ಯಮಿಗಳು, ಗಣ್ಯರು ಕ್ಯಾಪಿಟಲ್ನಲ್ಲಿ ಉಪಸ್ಥಿತರಿದ್ದರು.
ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಟ್ರಂಪ್ಗೆ ಮೋದಿ ಬರೆದು ಕಳುಹಿಸಿದ ಶುಭಾಶಯ ಪತ್ರವನ್ನು ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ದೇಶಗಳ ನಾಯಕರನ್ನು ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕದ ಮಾಜಿ ಅಧ್ಯಕ್ಷ ಜೈ ಬೈಡೆನ್ ಮತ್ತು ಜಿಲ್ ಬಿಡೆನ್ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರಿಗೆ ಚಹಾ ಪಾರ್ಟಿ ಆಯೋಜಿಸಿದ್ದರು. ಇದಾದ ನಂತರ ನಾಲ್ಕೂ ಜನ ಒಟ್ಟಿಗೇ ಕ್ಯಾಪಿಟಲ್ಗೆ ನಡೆದ ಸಮಾರಂಭಕ್ಕೆ ಪ್ರಯಾಣಿಸಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಮಾತನಾಡಿದ ಟ್ರಂಪ್ “ಅಮೆರಿಕದ ಸುವರ್ಣಯುಗ” ಈಗ ಪ್ರಾರಂಭವಾಗುತ್ತದೆ” ಎಂದು ಘೋಷಿಸಿದರು.
ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ನಂತರ ಅವರ ಮೊದಲ ಭಾಷಣದಲ್ಲಿ ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ನಡೆದ ಹತ್ಯೆಯ ಪ್ರಯತ್ನವನ್ನು ಉಲ್ಲೇಖಿಸಿ “ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಲು ದೇವರು ರಕ್ಷಿಸಿದ್ದಾನೆ” ಎಂದು ಹೇಳಿದರು.
“ಅಮೆರಿಕದ ಸುವರ್ಣಯುಗ’ ಇದೀಗ ಆರಂಭವಾಗಿದೆ. ನಾವು ಮತ್ತೊಮ್ಮೆ ಮಹಾನ್ ರಾಷ್ಟ್ರವಾಗುತ್ತೇವೆ. ಪ್ರಪಂಚದ ಉಳಿದ ಭಾಗಗಳು ನಮ್ಮನ್ನು ನೋಡಿ ಅಸೂಯೆಪಡುತ್ತವೆ” ಎಂದು ಅವರು ಬೆಂಬಲಿಗರ ಹರ್ಷೋದ್ಗಾರಗಳ ಮಧ್ಯೆ ಹೇಳಿದರು.
ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರು, ಮಹಿಳಾ ಕ್ರೀಡೆಗಳಿಂದ ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳನ್ನು ನಿಷೇಧಿಸುವುದು ಮತ್ತು ವೈವಿಧ್ಯತೆ ಮತ್ತು ತೈಲ ಕೊರೆಯುವಿಕೆಯ ಬಗ್ಗೆ ಅವರ ಹಿಂದಿನ ಅಧ್ಯಕ್ಷರ ನಿರ್ದೇಶನಗಳನ್ನು ರದ್ದುಗೊಳಿಸುವುದು ಸೇರಿದಂತೆ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು.